ಕುಂಬಳೆ: ರಾಷ್ಟ್ರದಲ್ಲಿ ಪಂಚಾಯತಿ ರಾಜ್ ಕಾಯ್ದೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಪ್ರಮುಖ ಗ್ರಾ.ಪಂ.ಗಳಲ್ಲಿ ಒಂದಾಗಿರುವ ಕುಂಬಳೆ ಗ್ರಾ.ಪಂ. ಕಾರ್ಯಾಲಯಕ್ಕೆ ಶನಿವಾರ ಅಪರಾಹ್ನ ಕರ್ನಾಟಕ ಸರಕಾರದ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಗ್ರಾ.ಪಂ. ಕಾರ್ಯಚಟುವಟಿಕೆಗಳ ಬಗ್ಗೆ ಸಮವಾದ ನಡೆಸಿದರು.
ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದ ಬಳಿಕ 2008ರಲ್ಲಿ ರಾಷ್ಟ್ರ ಮಟ್ಟದ ಪುರಸ್ಕಾರ ಪಡೆದಿದ್ದ ಕುಂಬಳೆ ಗ್ರಾ.ಪಂ. ನ ಒಟ್ಟು ಕಾರ್ಯಕ್ರಮಗಳು, ಯೋಜನೆಗಳ ತಯಾರಿ, ಅನುಷ್ಠಾನ, ಅಧ್ಯಕ್ಷರು, ಸದಸ್ಯರುಗಳ ಜವಾಬ್ದಾರಿಗಳ ಬಗ್ಗೆ ಅವರು ವಿಸ್ಕøತವಾಗಿ ಮಾಹಿತಿ ಪಡೆದುಕೊಂಡರು. ಸ್ವತಃ ಪಂಚಾಯತ್ ರಾಜ್ ಕಾಯ್ದೆಯ ಅಧ್ಯಯನಶೀಲರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಸಂದರ್ಭ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಈ ಕಾಯ್ದೆ ಹಂತಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಯೋಜನೆಯ ಅನುಷ್ಠಾನದಲ್ಲಿ ಮಾದರಿಯಾದ ಕೇರಳ ರಾಜ್ಯದ ಪ್ರಯತ್ನಗಳು ಶ್ಲಾಘನೀಯ ಎಂದು ತಿಳಿಸಿದರು. ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಕಾಯ್ದೆಯ ಹೊಸ ದೃಷ್ಟಿಕೋನ ಅತ್ಯಂತ ಯಶಸ್ವಿಯಾಗಿ ಕೇರಳದಲ್ಲಿ ಜಾರಿಗೊಂಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಈ ಕಾಯ್ದೆ ನೆರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಕೇರಳ ಮಾದರಿಯ ಯೋಜನೆ ಮುಂದಿನ ದಿನಗಳಲ್ಲಿ ಜಾರಿಗೊಳಿಸುವ ಬಗ್ಗೆ ಚಿಂತನೆಗಳು ವಿಸ್ಕøತವಾಗಿ ಸಾಗಿದೆ ಎಂದ ಅವರು ತಳಮಟ್ಟದ ನಾಯಕತ್ವದ ಮೂಲಕ ಮುನ್ನೆಲೆಗೆ ಬರುವಲ್ಲಿ, ಯೋಜನೆಗಳನ್ನು ತಳಮಟ್ಟದಲ್ಲೇ ವಿಕೇಂದ್ರೀಕರಿಸಿಕೊಂಡು ಅಭಿವೃದ್ದಿಹೊಂದುವಲ್ಲಿ ಕರ್ನಾಟಕ ಸರ್ಕಾರ ಇನ್ನಷ್ಟು ಪ್ರಗತಿಯನ್ನು ಸಾಧಿಸಲಿದೆ ಎಂದು ತಿಳಿಸಿದರು.
ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ಉಪಾಧ್ಯಕ್ಷೆ ಗೀತಾ ಎಲ್.ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಅಬ್ಬಾಸ್, ಬ್ಲಾ.ಪಂ.ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಗ್ರಾ.ಪಂ.ಹಿರಿಯ ಸೂಪರಿಟೆಂಡೆಂಟ್ ಸುರೇಶ್ ಬಿ.ಎನ್. ಉಪಸ್ಥಿತರಿದ್ದು ಕೋಟ ಶ್ರೀನಿವಾಸ ಪೂಜಾರಿಯವರೊಂದಿಗೆ ಸಂವಾದ ನಡೆಸಿದರು. ಗ್ರಾ.ಪಂ.ಕಾರ್ಯದರ್ಶಿ ಪಿ.ಜಯನ್ ಸ್ವಾಗತಿಸಿ, ಗ್ರಾ.ಪಂ.ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕುಂದಾಪುರ ತಾಲೂಕು ಪಂಚಾಯತಿ ಸದಸ್ಯ ಕರುಣಾ, ಬಂಟ್ವಾಳ ತಾ.ಪಂ. ಪಿಡಿಓ ನಯನಾ, ಪ್ರತಿಪಕ್ಷ ನಾಯಕರ ಕಾರ್ಯದರ್ಶಿಗಳಾದ ಹರೀಶ್ ಶೆಟ್ಟಿ ಹಾಗೂ ಪ್ರಕಾಶ್, ಕುಂಬಳೆ ಗ್ರಾ.ಪಂ. ಸದಸ್ಯರಾದ ಮುರಳೀದರ ಯಾದವ್, ರಮೇಶ್ ಭಟ್, ಸುಜಿತ್ ರೈ, ಪೈವಳಿಕೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಣಿಕಂಠ ರೈ ಪಟ್ಲ, ಸುಧಾಕರ ಕಾಮತ್ ಕುಂಬಳೆ, ಸುರೇಶ್ ಶಾಂತಿಪಳ್ಳ, ಪ್ರೊ.ಎ.ಶ್ರೀನಾಥ್ ಮೊದಲಾದವರು ಭಾಗವಹಿಸಿದ್ದರು.
ಹೈಲೈಟ್ಸ್:
ಗ್ರಾ.ಪಂ.ಗಳು ಜವಾಬ್ದಾರಿ ಹೊತ್ತಿರುವ ಮತ್ತು ಜಾರಿಗೊಳಿಸುವ ವೃದ್ದಾಪ್ಯ ಪಿಮಚಣಿ, ಅಂಗವಿಕಲ ಪಿಂಚಣಿ, ಗೃಹ ನಿರ್ಮಾಣ, ಶೌಚಾಲಯ ನಿರ್ಮಾಣ, ಕುಡಿಯುವ ಶುದ್ದ ಜಲ ವಿತರಣೆ, ಹಿಂದುಳಿದ ಜಾತಿ ಮತ್ತು ವರ್ಗಗಳ ಯೋಜನಾ ಅನುಷ್ಠಾನ, ಗ್ರಾಮ ಸಭೆಗಳು, ಮಕ್ಕಳ ಗ್ರಾಮ ಸಭೆ, ಕುಟುಂಬಶ್ರೀ ಚಟುವಟಿಕೆ, ಗ್ರಾ.ಪಂ.ಸದಸ್ಯರ ಚಟುವಟಿಕೆಗಳ ವಿಸ್ತಾರತೆ, ಅನುಬಂಧಗಳು, ನಿಬಂಧನೆಗಳು ಮೊದಲಾದವುಗಳ ಬಗ್ಗೆ ಶ್ರೀನಿವಾಸ ಪೂಜಾರಿಯವರು ಎರಡು ಗಂಟೆಗಳಗಿಂತಲೂ ಹೆಚ್ಚು ಹೊತ್ತು ವಿಸ್ಕøತ ಚರ್ಚೆ ನಡೆಸಿದರು.