ಪೆರ್ಲ:ಜಲ ಸಮೃದ್ದತೆಯಿದ್ದಲ್ಲಿ ನಾಡು ಸರ್ವತೋಮುಖ ಅಭಿವೃದ್ಧಿ ಸಾಧಿಸುವುದೆಂದು ಜಲತಜ್ಞ ಶ್ರೀಪಡ್ರೆ ಅಭಿಪ್ರಾಯ ಪಟ್ಟರು.
'ನಮ್ಮ ನಡಿಗೆ ತೋಡಿನೆಡೆಗೆ' - 'ನೀರ ನೆಮ್ಮದಿಯತ್ತ ಪಡ್ರೆ' ಸ್ವರ್ಗದಲ್ಲಿ ಭಾನುವಾರ ನಡೆದ ಜಲ ಕಾರ್ಯಕರ್ತರ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹಳ್ಳಿ ಪ್ರದೇಶದ ಬಹುತೇಕ ಜನರು ಕೃಷಿ ಹಾಗೂ ಹೈನುಗಾರಿಕೆ ಪರಂಪರೆ ಹೊಂದಿದ್ದಾರೆ. ಇವೆರಡು ವ್ಯವಸಾಯದ ಅಭಿವೃದ್ಧಿ ಹಾಗೂ ಸುಧಾರಣೆಗೆ ಜಲ ಸಮೃದ್ಧತೆ ಅನಿವಾರ್ಯ. ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆ ದಕ್ಷಿಣ ಕನ್ನಡ ಜಿಲ್ಲೆಯ ಚಿರಾಪುಂಜಿ ಎಂದೇ ಹೆಸರು ಪಡೆದಿದೆ. ಕಲ್ಲಾಜೆಯಲ್ಲಿ ವರ್ಷದ 7ತಿಂಗಳು ಮಳೆಯಾದರೂ ಈ ಬಾರಿ ನೀರಿನ ಕ್ಷಾಮ ಕಾಡಿದೆ. ನೀರಿನ ಅತಿ ಬಳಕೆ, ಇಂಗಿಸುವ ಪ್ರಯತ್ನ ನಡೆಯದಿರುವುದು ನೀರಿನ ಕ್ಷಾಮಕ್ಕೆ ಪ್ರಮುಖ ಕಾರಣವಾಗಿದೆ. ಭೂಮಿ ಕೇವಲ ನೀರನ್ನು ಹಿಡಿದಿರಿಸುವ ಜಲಪಾತ್ರೆ. ಬ್ಯಾಂಕ್ ಖಾತೆಯಲ್ಲಿ ಠೇವಣಿ ಇರಿಸುವಂತೆ ಮಳೆ ನೀರನ್ನು ಭೂಮಿಯಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಮಾಡಿದಲ್ಲಿ ಬೇಸಗೆಯಲ್ಲಿ ನೀರಿಗೆ ಪರದಾಟ ನಡೆಸಬೇಕಾಗಿಲ್ಲ. ಕಣಿವೆ, ತೋಡು, ಹೊಳೆಗಳ ಮೂಲಕ ಸಮುದ್ರ ಸೇರುವ ಮಳೆ ನೀರನ್ನು ಜಮೀನಿನ ಅಲ್ಲಲ್ಲಿ ಹರಿಯುವಿಕೆಯ ರಭಸವನ್ನು ತಡೆಗಟ್ಟಿ ಇಂಗಿಸಿದಲ್ಲಿ ಆಸುಪಾಸಿನ ಜಲ ಮೂಲಗಳ ನೀರಿನ ಮಟ್ಟ ಸುಧಾರಿಸುವುದು. ಮಳೆ ನೀರಿನ ರಭಸದ ಹರಿಯುವಿಕೆ, ಮಣ್ಣಿನ ಸಾವಯವ ಸಂಪನ್ಮೂಲ ನಾಶದಿಂದ ಮಣ್ಣು ನೀರಿಂಗಿಸುವ ಗುಣ ಕಳೆದು ಕೊಳ್ಳುತ್ತಿದೆ. ಮಣ್ಣಿಗೆ ಸಾವಯವ ಸಂಪನ್ಮೂಲಗಳನ್ನು ಪೂರೈಸುವ ವ್ಯವಸ್ಥೆ ನಡೆಯಬೇಕು. ಕಾಸರಗೋಡಿನಲ್ಲಿ ಸಾಮಾನ್ಯ ಒಂದು ಚ.ಮೀ.ವಿಸ್ತೀರ್ಣದ ಪ್ರದೇಶದಲ್ಲಿ 3,500 ಲೀ.ಮಳೆ ಸುರಿಯುತ್ತದೆ.10 ಸೆಂಟ್ಸ್ ಸ್ಥಳದಲ್ಲಿ 14 ಲಕ್ಷ ಲೀ. ಮಳೆಯಾಗುತ್ತಿದೆ. ಪುಟ್ಟ ಕುಟುಂಬವೊಂದರ
ಒಂದು ವರ್ಷದ ಗೃಹ ಬಳಕೆಗೆ ಕೇವಲ 2.5ಲಕ್ಷ ನೀರು ಸಾಕಾಗುತ್ತದೆ. ನಮ್ಮ ತಲೆ ಮೇಲೆ ಸುರಿವ ಮಳೆ ನೀರನ್ನು ಹಿಡಿದಿರಿಸುವ ಪ್ರಯತ್ನ ನಡೆದಲ್ಲಿ ನಾವು ಎದುರಿಸಿದ್ದ ನೀರಿನ ಕ್ಷಾಮ ಎಂದಿಗೂ ಮರು ಕಳಿಸದು ಎಂದು ಅವರು ಈ ಸಂದರ್ಭ ಸಮಗ್ರ ಮಾಹಿತಿಯೊಂದಿಗೆ ವಿವರಿಸಿದರು.
ಹಲವು ಇಂಗುಗುಂಡಿ ನಿರ್ಮಿಸುವ ಮೂಲಕ ವಾಣೀನಗರ ಬೈಲಮೂಲೆಯ ಜಲ ಮೂಲಗಳಲ್ಲಿ ನೀರಿನ ಸಮೃದ್ಧತೆಗೆ ಕಾರಣರಾದ ಸಾಧಕಿ ಪ್ರೇಮ ಬೈಲಮೂಲೆ ಜಲ ಚಟುವಟಿಕೆಗಳ ಅಧಿಕೃತ ಉದ್ಘಾಟನೆ ನಡೆಸಿದರು.
ಮಳೆಕೊಯ್ಲು, ಮಳೆ ನೀರು ಇಂಗಿಸುವ ಮೂಲಕ ಮರುಕಳಿಸಿದ ಜಲ ಸಮೃದ್ಧತೆಯ ಸ್ಲೈಡ್ ಶೋ ಪ್ರದರ್ಶನ,ಪ್ರಶ್ನೋತ್ತರ ಹಾಗೂ ಸಂವಾದಗಳು ನಡೆದವು. ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ವೈ., ಶ್ರೀಧರ ಭಟ್ ಕೆ.ವೈ., ಜಗದೀಶ್ ಕುತ್ತಾಜೆ, ಶ್ರೀನಿವಾಸ ಸ್ವರ್ಗ ಅನುಭವ ತಿಳಿಸಿದರು. ಜೂ. 23ರಂದು ಜಲಮೂಲಗಳ ನೀರಿನ ಮಟ್ಟ ಹೆಚ್ಚಿಸಲು ಸ್ಥಳ ಪರಿಶೀಲನೆ, ನೀರಿಂಗಿಸುವ ಸಾಧ್ಯತೆ ಕುರಿತು ಮಾಹಿತಿ ಕಾರ್ಯಾಗಾರ ನಡೆಯಲಿದೆ.