ಒಸಾಕಾ(ಜಪಾನ್): ಜಪಾನ್ ನ ಬಂದರು ನಗರಿ ಒಸಾಕಾದಲ್ಲಿ ನಾಳೆ ಜಿ20 ಶೃಂಗಸಭೆ ಆರಂಭಕ್ಕೆ ಮೊದಲು ಭಾರತದ ಮುಂದೆ ಬೇಡಿಕೆಯಿಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಇತ್ತೀಚೆಗೆ ಅಮೆರಿಕದ ಮೇಲೆ ಹೇರಿರುವ ಅಧಿಕ ತೆರಿಗೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಷಯವನ್ನು ಶುಕ್ರವಾರದಿಮದ (ಇಂದು) ಮತ್ತು ಶನಿವಾರವ ನಡೆಯಲಿರುವ ಜಿ20 ಶೃಂಗಸಭೆಯ ಹೊರಗೆ ಪ್ರಧಾನಿ ಮೋದಿಯವರ ಜೊತೆ ಪ್ರಸ್ತಾಪಿಸುವುದಾಗಿ ಕೂಡ ಹೇಳಿದ್ದಾರೆ.
ಬುಧವಾರ ಭಾರತಕ್ಕೆ ಆಗಮಿಸಿದ್ದ ಅಮೆರಿಕಾ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ವ್ಯಾಪಾರ-ವಹಿವಾಟಿಗೆ ಸಂಬಂಧಪಟ್ಟಂತೆ ಎರಡೂ ರಾಷ್ಟ್ರಗಳ ನಡುವೆ ಕೆಲವು ವಿಚಾರಗಲ್ಲಿ ಭಿನ್ನಾಭಿಪ್ರಾಯಗಳಿದ್ದು ಅವುಗಳನ್ನು ಬಗೆಹರಿಸಬೇಕಾಗಿದೆ ಎಂದು ಹೇಳಿದ್ದರು.
ಅಮೆರಿಕಾದಿಂದ ಆಮದು ಮಾಡಿಕೊಳ್ಳುವ ಸ್ಟೀಲ್ ಮತ್ತು ಅಲ್ಯೂಮಿನಿಯಂ ವಸ್ತುಗಳ ಮೇಲೆ ಅಧಿಕ ಆಮದು ತೆರಿಗೆ ವಿಧಿಸಿರುವುದಕ್ಕೆ ಪ್ರತಿಯಾಗಿ ಭಾರತ 25 ಅಮೆರಿಕಾ ವಸ್ತುಗಳ ಮೇಲೆ ಅಧಿಕ ರಫ್ತು ತೆರಿಗೆಯನ್ನು ಹೇರಿತ್ತು. ಅಂದರೆ ಅಮೆರಿಕಾಕ್ಕೆ ಭಾರತದಿಂದ ವಸ್ತುಗಳನ್ನು ಖರೀದಿಸುವಾಗ ದುಬಾರಿಯಾಗುತ್ತದೆ. ಈ ಅಧಿಕ ತೆರಿಗೆ ಕ್ರಮವನ್ನು ಹಿಂತೆಗೆದುಕೊಳ್ಳಬೇಕೆಂದು ಡೊನಾಲ್ಡ್ ಟ್ರಂಪ್ ಕಳೆದೊಂದು ವರ್ಷದಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ.
ಈ ಮಧ್ಯೆ ಗುರುವಾರ ಜಪಾನ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶಿಂಜೊ ಅಬೆ ಜೊತೆಗೆ ಮೊದಲ ಸಭೆ ನಡೆಸಲಿದ್ದಾರೆ. ನಾಳೆ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಮುಖಾಮುಖಿ ಭೇಟಿಯಾಗುವ ಸಾಧ್ಯತೆಯಿದೆ.