ಕಾಸರಗೋಡು: ಡಾ.ಪ್ರಭಾಕರನ್ ಆಯೋಗ ವರದಿ ಪ್ರಕಾರ ಜಿಲ್ಲೆಗಾಗಿ ರಚಿಸಿರುವ ವಿಶೇಷ ಯೋಜನೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ಗಾಗಿ ಯೋಜನೆ ನಿರ್ವಹಣೆ ದಾಖಲೆ(ಡಿ.ಪಿ.ಆರ್.) ಸಿದ್ಧಗೊಳಿಸುವ ನಿಟ್ಟಿನಲಿ ಒಂದು ದಿನದ ಕಾರ್ಯಾಗಾರ ಜರುಗಿತು.
ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಮತ್ತು ಸಿಬ್ಬಂದಿಗಾಗಿ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಕಾರ್ಯಾಗಾರ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಯೋಜನೆಯೊಂದನ್ನು ಜಾರಿಗೊಳಿಸುವ ವೇಳೆ ಆ ಪ್ರದೇಶದ ಸಮಗ್ರ ಮಾಹಿತಿಗಳನ್ನು ಪರಿಶೀಲಿಸಬೇಕು. ಫಲಾನುಭವಿಗಳನ್ನೂ ಗಣನೆಗೆ ತೆಗೆದುಕೊಂಡು ಯೋಜನೆ ರಚಿಸಬೇಕು. ಇದು ನಾಡಿನ ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಿಬ್ಬಂದಿಯ ಪ್ರಾಮಾಣಿಕಯತ್ನದಿಂದ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದವರು ನುಡಿದರು.
ಪ್ರಭಾಕರನ್ ಆಯೋಗದ ವರದಿ 2012ರಲ್ಲಿ ಸಲ್ಲಿಸಲಾಗಿದ್ದರೂ, ಅದನ್ನು ಜಾರಿಗೊಳಿಸುವಲ್ಲಿನ ತಾಂತ್ರಿಕ ಅಡೆಚಣೆಗಳ ಕುರಿತು ಕಾರ್ಯಾಗಾರದಲ್ಲಿಚರ್ಚೆ ನಡೆಸಲಾಯಿತು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಕೇಂದ್ರ ವಿವಿ ಹಣಕಾಸು ಅಧಿಕಾರಿ ಡಾ.ಬಿ.ಆರ್.ಪ್ರಸನ್ನ ಕುಮಾರ್, ಐ.ಎಂ.ಜಿ. ಉಪನ್ಯಾಸಕ ಡಾ.ಎಸ್.ಸಜೀವ್ ವಿವಿಧ ವಿಚಾರಗಳ ಕುರಿತು ಮಾಹಿತಿ ನೀಡಿದರು. ಕ್ರಿಯಾತ್ಮಕ ಗೋಷ್ಠಿ ನಡೆಯಿತು. ಸಿ.ರಾಜೇಶ್ ಚಂದ್ರನ್ ವಂದಿಸಿದರು.