ಕಾಸರಗೋಡು: ಕಾಸರಗೋಡು ಜಿಲ್ಲೆಯ ಕರವಾಳಿ ತೀರ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕಳೆದ ಮೂರು ದಿನಗಳಿಂದ ಉಪ್ಪಳ ಮುಸೋಡಿ, ಕಸಬಾ ಕಡಪ್ಪುರ, ಉದುಮ ಸಮುದ್ರ ತೀರಗಳಲ್ಲಿ ಕಡಲ್ಕೊರೆತ ಉಂಟಾಗಿದೆ.
ಉದುಮ ಹಾಗೂ ಕೊವ್ವಲ್ ತೀರ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಕಡಲು ಭಿತ್ತಿ ಇಲ್ಲದ ಪ್ರದೇಶಗಳಲ್ಲಿ ತೀರ ಪ್ರದೇಶ ಸಮುದ್ರ ಪಾಲಾಗಿದೆ. ಆದರೆ ಇದೀಗ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿದ್ದು, ಕೇರಳದ ತೀರ ಪ್ರದೇಶಗಳಲ್ಲಿ 3ರಿಂದ 4 ಮೀಟರ್ ತನಕ ಎತ್ತರದಲ್ಲಿ ಸಮುದ್ರ ಅಲೆಗಳು ಉಂಟಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಕೇರಳ ತೀರ ಪ್ರದೇಶದಲ್ಲಿಯೇ ಎತ್ತರ ಅಲೆ ಬೀಸುವ ಸಾಧ್ಯತೆ ಇದೆ. ಇದರಿಂದಾಗಿ ತೀರ ಪ್ರದೇಶಗಳಲ್ಲಿರುವ ಮೀನು ಕಾರ್ಮಿಕರ ಕುಟುಂಬಗಳು ಜಾಗ್ರತೆ ಪಾಲಿಸುವಂತೆ ತಿಳಿಸಿದೆ. ಅಲ್ಲದೆ ಆಗ್ನೇಯ ದಿಕ್ಕಿನಿಂದ ಗಂಟೆಗೆ 35ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನು ಕಾರ್ಮಿಕರು ಸಮುದ್ರಕ್ಕಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ತಡವಾಗಿ ಮುಂಗಾರು ಪ್ರವೇಶಿಸಿದ್ದರೂ ಉತ್ತಮ ಮಳೆ ಲಭಿಸಲಿಲ್ಲ. ಭಾನುವಾರ ಮುಂಜಾನೆ ಕೆಲವೆಡೆ ತುಂತುರು ಮಳೆಯಾಗಿದೆ. ಬಾವಿ ಹಾಗೂ ಜಲಾಶಯಗಳ ಮಟ್ಟ ಇನ್ನೂ ಏರಿಕೆಯಾಗಿಲ್ಲ. ಪಯಸ್ವಿನಿ ಸಹಿತ ಹೊಳೆಗಳಲ್ಲಿ ಸರಿಯಾಗಿ ನೀರಿನ ಹರಿಯುವು ಇನ್ನೂ ಆರಂಭಗೊಂಡಿಲ್ಲ. ಹಾಲಿ ವರ್ಷ ಈ ತನಕ ಲಭಿಸಬೇಕಾದ ಮಳೆಯಲ್ಲಿ ಶೇ.30ರಷ್ಟು ಕುಸಿತ ಉಂಟಾಗಿದೆ. ಕೇರಳದಲ್ಲಿ ಮುಂದಿನ ಮೂರು ದಿನಗಳಲ್ಲಿ ಮಳೆ ದುರ್ಬಲಗೊಳ್ಳುವುದಾಗಿಯೂ, ಬಿರುಗಾಳಿ ಬೀಸುವ ಸಾಧ್ಯತೆ ಇರುವುದಾಗಿ ಮುನ್ನೆಚ್ಚರಿಕೆ ನೀಡಿದೆ.
(ಚಿತ್ರ ಮಾಹಿತಿ: ಉಪ್ಪಳ ಮುಸೋಡಿಯಲ್ಲಿ ಕಡಲ್ಕೊರೆತದಿಂದ ಕಡಲು ಪಾಲಾದ ಮನೆ, ಹಾಗೂ ಕಡಲ್ಕೊರೆತದಲ್ಲಿ ಸಮುದ್ರ ತಂದೆಸೆದ ಮಾಲಿನ್ಯ.)