ಕಾಸರಗೋಡು: ಜಿಲ್ಲೆಯಲ್ಲಿ ಸೊಳ್ಳೆಗಳು ಹರಡಿಸುವ ರೋಗಗಳ ಕುರಿತು ಮತ್ತು ಅದರ ಪರಿಣಾಮದ ಕುರಿತು ಒಂದೆಡೆ ಆರೋಗ್ಯ ಇಲಾಖೆ ಅಧ್ಯಯನ ನಡೆಸುತ್ತಿರುವಾಗಲೇ ಇನ್ನೊಂದು ಭಾಗದಲ್ಲಿ ವಿವಿಧ ಪ್ರದೇಶಗಳು ಸೊಳ್ಳೆ ಸಾಕಣಾ ಕೇಂದ್ರಗಳಾಗಿ ಭೀತಿ ಹುಟ್ಟಿಸುತ್ತಿದೆ.
ಡೆಂಗ್ಯೂ, ಮಲೇರಿಯ ಮೊದಲಾದ ಜ್ವರವನ್ನು ಹರಡುವ ಸೊಳ್ಳೆಗಳು ಹೇಗೆ ವಂಶ ಹೆಚ್ಚಳ ಉಂಟುಮಾಡುತ್ತಿವೆ ಎಂಬ ಅಧ್ಯಯನ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ಚೆಂಗಳ ಪಂಚಾಯಿತಿಯ ಆರ್ಲಡ್ಕ ಪ್ರದೇಶದಲ್ಲಿ ಕಳೆದ ವರ್ಷ ಅತ್ಯಧಿಕ ಮಂದಿಗೆ ಡೆಂಗೆ ಜ್ವರ ಬಾಧಿಸಿರುವುದಾಗಿ ಆರೋಗ್ಯ ಇಲಾಖೆ ಪತ್ತೆಹಚ್ಚಿದೆ. ಇದರಿಂದಾಗಿ ಪ್ರದೇಶದಲ್ಲಿ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಸೊಳ್ಳೆ ಸಂಖ್ಯೆ-ವೆಕ್ಟರ್ ಅಧ್ಯಯನ ನಡೆಯುತ್ತಿದೆ.
ಇದೇ ಸಂದರ್ಭ ಚೆಂಗಳ ಪಂಚಾಯಿತಿನ ವಿವಿಧ ಹೊಳೆ ತೀರಗಳಲ್ಲಿ ಅಧಿಕಾರಿಗಳು ಮುರಿದು ಎಸೆದ ದೋಣಿಗಳಲ್ಲಿ ನೀರು ನಿಂತು ಸೊಳ್ಳೆಗಳು ಮೊಟ್ಟೆ ಇಟ್ಟ ಸ್ಥಿತಿಯನ್ನು ಗುರುತಿಸಿದ್ದಾರೆ. ಅಕ್ರಮ ಮರಳು ಸಾಗಾಟ ನಡೆಸಿದ ಹಲವಾರು ದೋಣಿಗಳನ್ನು ಜಿಲ್ಲೆಯ ವಿವಿಧ ಹೊಳೆ ತೀರಗಳಲ್ಲಿ ಪೊಲೀಸ್, ಮರಳು ಬೇಟೆ ತಂಡ ಮುರಿದು ಎಸೆದಿತ್ತು.
ಆದರೆ ಇವುಗಳ ಅವಶೇಷಗಳು ಜಿಲ್ಲೆಯ ಹೆದ್ದಾರಿ ಬದಿಯನ್ನು ಪೂರ್ತಿಯಾಗಿ ಶುಚಿಗೊಳಿಸಿದ ಸಂಘ-ಸಂಸ್ಥೆಗಳ, ನೇತೃತ್ವ ನೀಡಿದ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿಯ ತೆಕ್ಕಿಲ್ ಹೊಳೆಯ ಬದಿ ಅಧಿಕಾರಿಗಳು ಮುರಿದು ಎಸೆದ ದೋಣಿಗಳಲ್ಲಿ ಸೊಳ್ಳೆಗಳು ವಿಹರಿಸುವ ದೃಶ್ಯ ಸೇತುವೆಯ ಮೇಲ್ಭಾಗದಿಂದ ಸಂಚರಿಸುವ ಪ್ರಯಾಣಿಕರಿಗೆ ನೇರವಾಗಿ ಕಾಣುತ್ತಿದೆ. ರೋಗ ಹರಡುವ ಸೊಳ್ಳೆಗಳನ್ನು ನಾಶಗೊಳಿಸಲು ತಿಳಿವಳಿಕಾ ಕಾರ್ಯಕ್ರಮ ನಡೆಸುವ ಅಧಿಕಾರಿಗಳು ದೋಣಿ ತ್ಯಾಜ್ಯಗಳಲ್ಲಿ ರಾಶಿ ಬಿದ್ದಿರುವ ಸೊಳ್ಳೆಗಳನ್ನು ನಿರ್ನಾಮಗೊಳಿಸಲು ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಜಿಲ್ಲೆಯ ಹೊಳೆ ತೀರಗಳಲ್ಲಿ ಉಪಯೋಗ ಶೂನ್ಯವಾಗಿ ಬಿದ್ದಿರುವ ದೋಣಿಗಳಲ್ಲಿರುವ ಸೊಳ್ಳೆಗಳನ್ನು ಗುಂಪಾಗಿ ನಶಿಸಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಜಿಲ್ಲೆಯ ಹೆದ್ದಾರಿ ಇಕ್ಕೆಲಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಿರುವುದಾಗಿ ಅಧಿಕಾರಿಗಳು ಹೇಳುತ್ತಿರುವಾಗ ಕಾಸರಗೋಡು-ಕಾಞÂಂಗಾಡು ರಾಷ್ಟ್ರ್ರೀಯ ಹೆದ್ದಾರಿ ಬದಿ ಸಹಿತ ಜಿಲ್ಲೆಯ ರಸ್ತೆ ಬದಿಗಳಲ್ಲಿ ತ್ಯಾಜ್ಯ ವ್ಯಾಪಕವಾಗಿ ರಾಶಿ ಬೀಳುವ ದೃಶ್ಯ ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಎಚ್1 ಎನ್1, ಡೆಂಗೆ, ಮಲೇರಿಯ, ಇಲಿಜ್ವರ ಮೊದಲಾದ ರೋಗಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವಾಗ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ.
ಜಿಲ್ಲೆಯಲ್ಲಿ ಇಬ್ಬರಿಗೆ ಡೆಂಗೆ:
ಒಬ್ಬರಿಗೆ ಮಲೇರಿಯ: ಮಳೆಗಾಲ ಆರಂಭಗೊಳ್ಳುವ ಮೊದಲೇ ಡೆಂಗೆ ಜ್ವರ ಬಾಧಿಸಿ ಇಬ್ಬರು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಹೊರತು ಮಲೇರಿಯ ಬಾಧಿಸಿ ಇನ್ನೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಟ್ಟೂರು ನಿವಾಸಿಯಾದ ಇಬ್ಬರಿಗೆ ಡೆಂಗೆ ಜ್ವರ ಬಾಧಿಸಿದೆ. ಬೇಡಡ್ಕ ಪಂಚಾಯಿತಿನ ಕರಿವೇಡಡ್ಕ ನಿವಾಸಿಗೆ ಮಲೇರಿಯ ಬಾಧಿಸಿದೆ.
ಈ ಮಧ್ಯೆ ಜ್ವರ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಿರುವ ಕಾರಣ ಜೂ. 10ರಿಂದ ಪ್ರತ್ಯೇಕ ಜ್ವರ ಚಿಕಿತ್ಸಾಲಯಗಳು ಆರಂಭಗೊಳಿಸಲಾಗಿದೆ. ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ಒಳರೋಗಿ ಚಿಕಿತ್ಸೆ ನೀಡಲಾಗುತ್ತಿದೆ. ಸೊಳ್ಳೆ ಬಲೆ ಇತ್ಯಾದಿ ಸೌಕರ್ಯಗಳನ್ನು ಏರ್ಪಡಿಸಲಾಗಿದೆ. ಅಗತ್ಯ ಔಷಧಗಳು ಲಭ್ಯವಾಗಿವೆ. ಜ್ವರ ಬಾಧಿಸಿದವರನ್ನು ಪ್ರತ್ಯೇಕವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
ಮುಂಗಾರು ಕ್ಷೀಣ=ಹೆಚ್ಚಿದ ಸೊಳ್ಳೆ ರಾಗ:
ಪ್ರಸ್ತುತ ವರ್ಷ ಮುಂಗಾರು ಕ್ಷೀಣವಾಗಿರುವುದರಿಂದ ಮಾಲಿನ್ಯಗಳು ವ್ಯಾಪಕವಾಗಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟ ತೀವ್ರಗೊಂಡಿದೆ. ಸರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೆ ಮಾಲಿನ್ಯಗಳು ನೀರಲ್ಲಿ ಕೊಚ್ಚಿ ಒಯ್ಯಲ್ಪಡುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಸಾಧ್ಯವಾಗುವುದಿಲ್ಲ. ಆದರೆ ಈ ವರ್ಷದ ಹವಾಮಾನ ವೈಪರೀತ್ಯದ ಕಾರಣ ವ್ಯಾಪಕ ಸೊಳ್ಳೆ ಕಡಿತಗಳಿಂದ ಜನರು ತತ್ತರಿಸಿದ್ದಾರೆ. ಮೈಯಲ್ಲಿ ದದ್ದುಗಳೇಳುವುದು, ಅಲರ್ಜಿ ಮೊದಲಾದ ಸಮಸ್ಯೆಗಳು ಎಲ್ಲೆಡೆ ಕಂಡುಬಂದಿದ್ದು, ವ್ಯವಸ್ಥೆಗಳಿಲ್ಲದ ಹಳ್ಳಿ ಪ್ರದೇಶಗಳ ಜನರು ಹೆಚ್ಚು ತೊಂದರೆಗಳಿಗೆ ಒಳಗಾಗಿದ್ದಾರೆ.