ಕುಂಬಳೆ: ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ನಿವೃತ್ತಿಯಾಗದಿದ್ದರೆ ಮಾನಸಿಕ ನೆಮ್ಮದಿ ಶತಃಸಿದ್ಧ ಎಂದು ಧರ್ಮತ್ತಡ್ಕ ಶ್ರೀ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಗಿರೀಶ್ ಕುಮಾರ್ ಕಯ್ಯಾರು ಅಭಿಪ್ರಾಯಪಟ್ಟರು.
ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯಲ್ಲಿ 26 ವರ್ಷಗಳ ಕಾಲ ಕನ್ನಡ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸುನಿತಾ ಟೀಚರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಸಂಚಾಲಕಿ ಶಾರದಾಮ್ಮ, ಮುಖ್ಯೋಪಾಧ್ಯಾಯ ಎನ್. ರಾಮಚಂದ್ರ ಭಟ್, ಎನ್. ಮಹಾಲಿಂಗ ಭಟ್ ಮತ್ತು ವ್ಯವಸ್ಥಾಪಕರಾದ ಶಂಕರನಾರಾಯಣ ಭಟ್ ಬೀಳ್ಕೊಡುತ್ತಿರುವ ಅಧ್ಯಾಪಿಕೆಗೆ ಶುಭ ಹಾರೈಸಿದರು. ಹಿರಿಯರಾದ ಶಾರದಮ್ಮ ನೇರೋಳು ಅವರು ಅಧ್ಯಾಪಿಕೆಗೆ ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿದರು. ಅಧ್ಯಾಪಕರಾದ ನರಸಿಂಹ ರಾಜ್, ಅಶೋಕ್, ಶ್ವೇತ ಟೀಚರ್, ಸತೀಶ್ ಶೆಟ್ಟಿ, ಈಶ್ವರಿ ಮತ್ತಿತರರು ಶುಭಾಶಂಸನೆಗೈದರು. ಗೋವಿಂದ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.