ಬದಿಯಡ್ಕ: ಹಲಸು ಹಾಗೂ ಗೋವಿನೊಂದಿಗೆ ಅಂಟಿಕೊಂಡ ಕಾರ್ಯಕರ್ತರ ನಂಟಿನಿಂದ ಹಲಸುಮೇಳವು ಯಶಸ್ಸನ್ನು ಕಂಡಿದ್ದು ಗೋವಿನ ಕುರಿತಾದ ಕಾಳಜಿ ಮತ್ತೊಮ್ಮೆ ಅನಾವರಣಗೊಂಡಿದೆ. ಗೋವಿನ ರಕ್ಷಣೆಗಾಗಿ ರಾಮಚಂದ್ರಾಪುರ ಮಠವು ಕಂಡುಕೊಂಡ ನೂತನ ಯೋಜನೆ ಹಲಸು ಆಗಿದೆ. ತನ್ಮೂಲಕ ಹಸುವಿನ ಹಸಿವೆಯನ್ನು ನೀಗಿಸುವಲ್ಲಿ ಇದು ಮೊದಲ ಹಲಸುಮೇಳವಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ ಹೇಳಿದರು.
ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆ, ಬದಿಯಡ್ಕ ಮಹಿಳೋದಯ ಹಾಗೂ ಗೋಭಕ್ತರ ಸಹಕಾರದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ನಡೆದ ಹಲಸುಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಲಕ್ಷ ಹಪ್ಪಳದ ಗುರಿ ಲಕ್ಷ್ಯವನ್ನು ತಲುಪಿದೆ ಎಂದ ಅವರು ಮನೆಯಲ್ಲಿ ಹಲಸಿನ ಮಯಣವಾಗಿದ್ದರೂ ಮನಸ್ಸಿನಲ್ಲಿ ಗೋಪ್ರೇಮ ಜಾಗೃತವಾಗಿದೆ ಎಂದರು.
ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಗೋವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಗುರುಗಳ ಕೃಪಾಕಟಾಕ್ಷದಿಂದ ಹಲಸು ಮೇಳವು ಅತ್ಯದ್ಭುತವಾದ ರೀತಿಯಲ್ಲಿ ಸಂಪನ್ನವಾಗಿದೆ. ಮಹಿಳಾ ಕಾರ್ಯಕರ್ತರ ಉತ್ಸಾಹ, ಶ್ರಮ, ಕಾಳಜಿಯು ನಮ್ಮಲ್ಲೇ ಇರುವ ವಸ್ತುವಿಗೆ ಬೇಡಿಕೆ ಬರುವಂತೆ ಮಾಡಿದೆ. ಮುಳ್ಳೇರಿಯ ಮಂಡಲದ 12 ವಲಯದ ಕಾರ್ಯಕರ್ತರು ಹಾಗೂ ಗೋಪ್ರೇಮಿಗಳು ಅಭಿನಂದನಾರ್ಹರು ಎಂದರು.
ತೂಗುಸೇತುವೆಯ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ ಹಲಸುಮೇಳ ಸಮಿತಿಯಿಂದ ಕೊಡಮಾಡಿದ ಗಿಡಗಳನ್ನು ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರಿಗೆ ಹಸ್ತಾಂತರಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ಸೂಚಿಸಿದರು.
ಗೋಕರ್ಣಮಂಡಲಾಧ್ಯಕ್ಷ ಈಶ್ವರಿ ಬೇರ್ಕಡವು ಮಾತನಾಡಿ, ಅನೇಕ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಕಾರ್ಯಕರ್ತರು ಗೋಪ್ರೇಮದಿಂದ ಎಲ್ಲವನ್ನೂ ಮೆಟ್ಟಿನಿಂತು ಮೇಳದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ. ಉತ್ತಮವಾದ ಸಂದೇಶವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯದಲ್ಲಿ ಮುಂದೆಯೂ ಎಲ್ಲರೂ ಕೈಜೋಡಿಸಬೇಕೆಂದರು. ಮುಳ್ಳೇರಿಯ ಹವ್ಯಕ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ಮಂಡಲ ಪ್ರಧಾನ ಗುರಿಕ್ಕಾರ ಮೊಗ್ರ ಸತ್ಯನಾರಾಯಣ ಭಟ್, ಮಹಿಳೋದಯದ ಸ್ಥಾಪಕಾಧ್ಯಕ್ಷೆ ಯಶೋದಮ್ಮ ಕಾರ್ಯಾಡು, ಹಲಸುಮೇಳ ಸಮಿತಿಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ದೀಪಾ ದೊಡ್ಡಮಾಣಿ ಮೇಳದ ಕುರಿತು ತನ್ನ ಅನುಭವವನ್ನು ಹಂಚಿಕೊಂಡರು. ಮಂಡಲ ಮಹಿಳಾ ಪ್ರಧಾನೆ ಕುಸುಮ ಪೆರ್ಮುಖ ಸ್ವಾಗತಿಸಿ, ಕುಂಬಳೆ ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮ ವಂದಿಸಿದರು. ಶಂಕರ ಪ್ರಸಾದ ಕುಂಚಿನಡ್ಕ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.