ಕಾಸರಗೋಡು: ರಸ್ತೆ ಅಭಿವೃದ್ಧಿಯ ನೆಪದಲ್ಲಿ ಹಲವು ವರ್ಷಗಳ ಹಳೆಯದಾದ ದೇವಸ್ಥಾನದ ಮಹಾದ್ವಾರವನ್ನು ತೆರವುಗೊಳಿಸುವ ವಿರುದ್ಧ ಭಕ್ತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಭಕ್ತರು ಕ್ರಿಯಾ ಸಮಿತಿಯನ್ನು ರಚಿಸಿ ಪ್ರತ್ಯಕ್ಷ ಹೋರಾಟಕ್ಕೆ ಸಿದ್ಧರಾಗಿದ್ದಾರೆ.
ಇತಿಹಾಸ ಪ್ರಸಿದ್ಧವಾದ ಹಾಗೂ ವಿಶ್ವ ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂರುವ ಬೇಕಲ ಕೋಟೆಯಲ್ಲಿರುವ ಮುಖ್ಯಪ್ರಾಣ ಆಂಜನೇಯ ದೇವಸ್ಥಾನಕ್ಕ ಹೋಗುವ ದಾರಿಯಲ್ಲಿರುವ ಮಹಾದ್ವಾರವನ್ನು ತೆರವುಗೊಳಿಸಲು ಸಂಬಂಧಪಟ್ಟವರು ತೀರ್ಮಾನಿಸಿದ್ದಾರೆ. 58 ವರ್ಷಗಳ ಹಿಂದೆ ಕೋಟಕುನ್ನು ಕೆಎಸ್‍ಟಿಪಿ ರಸ್ತೆಗೆ ಸಮಾನಾಂತರವಾಗಿ ಬೇಕಲ ಕೋಟೆಗೆ ತೆರಳುವ ರಸ್ತೆಗೆ ಮಹಾದ್ವಾರ ನಿರ್ಮಿಸಲಾಗಿತ್ತು. ಈ ಮಹಾದ್ವಾರವನ್ನು ಹಾಗೇ ಉಳಿಸಿಕೊಳ್ಳಬೇಕು ಇಲ್ಲವೇ ನೂತನವಾಗಿ ನಿರ್ಮಿಸಿಕೊಡಬೇಕೆಂದು ಭಕ್ತರು ಆಗ್ರಹಿಸಿದ್ದಾರೆ. ಈ ಬಗ್ಗೆ ದೇವಸ್ಥಾನದ ಪದಾಧಿಕಾರಿಗಳು ಎಡಿಎಂ ಅವರೊಂದಿಗೆ ಚರ್ಚಿಸಿದ್ದರೂ, ಯಾವುದೇ ತೀರ್ಮಾನವಾಗದಿರುವುದರಿಂದ ಕೋಟಕುನ್ನು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಸಭೆ ಸೇರಿ ಕ್ರಿಯಾ ಸಮಿತಿಯನ್ನು ರಚಿಸಲಾಯಿತು.
ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಭಟ್ ಆಯ್ಕೆಯಾಗಿದ್ದಾರೆ. ಎ.ಬಿ.ಪ್ರಕಾಶ್, ಪ್ರದೀಪ್ ಎಂ.ಕೂಟ್ಟಕಣಿ(ಉಪಾಧ್ಯಕ್ಷರು), ಮಣಿಕಂಠನ್(ಪ್ರಧಾನ ಕಾರ್ಯದರ್ಶಿ), ಸುಬ್ರಹ್ಮಣ್ಯನ್(ಜೊತೆ ಕಾರ್ಯದರ್ಶಿ), ನರೇಂದ್ರನ್ (ಕೋಶಾಧಿಕಾರಿ) ಅವರನ್ನು ಆರಿಸಲಾಯಿತು. ಭಕ್ತರ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.