ಮಂಜೇಶ್ವರ: ಸಮಾಜನೀತಿ ಇಲಾಖೆ ವತಿಯಿಂದ ಪರ್ಯಟನೆ ನಡೆಸಿದ ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾ ಗಮನ ಸೆಳೆದಿದೆ.
ಸಮಾಜದಲ್ಲಿ ವಯೋವೃದ್ಧರು ಅನುಭವಿಸುತ್ತಿರುವ ಕಿರುಕುಳ, ನಿರ್ಲಕ್ಷ್ಯ ಹೆಚ್ಚಳಗೊಳ್ಳುತ್ತಿರುವ ಸಂದರ್ಭ ಈ ಪಿಡುಗಿನ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಐ.ಸಿ.ಡಿಎಸ್,ನ ಸಹಕಾರದೊಂದಿಗೆ ಈ ವಾಹನ ಜಾಥಾ ಬುಧವಾರದಿಂದ ಪರ್ಯಟನೆ ನಡೆಸಿದೆ.
ಹಿರಿಯ ಪ್ರಜೆಗಳು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಜಾಗೃತಿ ಮೂಡಿಸುವ ದಿನಾಚರಣೆ ಜೂ.15ರಂದು ವಿಶ್ವಾದ್ಯಂತ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಾಹನಪ್ರಚಾರ ಆಯೋಜಿಸಲಾಗಿತ್ತು. ಈ ಗಂಭೀರ ಸಮಸ್ಯೆಯ ಕುರಿತು ಪರ್ಯಟನೆ ನಡೆಸುವ ಪ್ರದೇಶಗಳಲ್ಲಿ ಯುವಜನತೆಯನ್ನು ಪ್ರಧಾನವಾಗಿಸಿಕೊಂಡು ಪರಿಣತರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ತಮ್ಮ ಬದುಕಿನುದ್ದಕ್ಕೂ ಕುಟುಂಬದ ಸದಸ್ಯರಿಗಾಗಿ ದುಡಿದು ಬಸವಳಿದ ಜೀವ ವೃದ್ಧಾಪ್ಯದಲ್ಲಿ ವಿಶ್ರಾಂತ ಜೀವನ ನಡೆಸುವ ಸಂದರ್ಭ ನಿರ್ಲಕ್ಷ್ಯದ ಪಿಡುಗಿಗೆ ಗುರಿಯಾಗುವುದು ಒಂದು ಸಾಮಾಜಿಕ ದುರಂತ. ಈ ದುರವಸ್ಥೆ ಬದಲಾಗಿ ಇವರಿಗೆ ಪ್ರೀತಿ, ವಿಶ್ವಾಸ ಸಹಿತ ಸುಖಮಯ ಬದುಕನ್ನು ಒದಗಿಸೋಣ ಎಂಬ ಸಂದೇಶದೊಂದಿಗೆ ಈ ಪರ್ಯಟನೆ ನಡೆದಿದೆ. ಜಿಲ್ಲೆಯ ಪ್ರಧಾನ ಕೇಂದ್ರಗಳಲ್ಲಿ ಈ ಪರ್ಯಟನೆ ಜರುಗಿತು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಕಚೇರಿ ಆವರಣದಿಂದ ಬುಧವಾರ ಪ್ರಾರಂಭಿಸಿದ ಈ ಪರ್ಯಟನೆ ಕಾಲಿಕಡವಿನಲ್ಲಿ ಸಮಾರೋಪಗೊಂಡಿದೆ. ಮಂಜೇಶ್ವರದಲ್ಲಿ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅವರು ಬುಧವಾರ ಹಸುರು ನಿಶಾನೆ ತೋರಿಸಿ ಚಾಲನೆ ನೀಡಿದರು. ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮಹಮ್ಮದ್ ಮುಸ್ತಫ, ಸದಸ್ಯರಾದ ಪ್ರಸಾದ್ ರೈ ಕಯ್ಯಾರು, ಹಸೀನಾ, ಸಾಯಿರಾ ಬಾನು, ಹೆಚ್ಚುವರಿ ಬ್ಲಾಕ್ ವಿಸ್ತರಣಾಧಿಕಾರಿ ನೂತನ ಕುಮಾರಿ, ಎ.ಟಿ.ಶಶಿ ಮೊದಲಾದವರು ಉಪಸ್ಥಿತರಿದ್ದರು.