ಮಂಜೇಶ್ವರ: ಸಮಾಜದಲ್ಲಿ ಅನಾಚಾರಗಳು ಹಾಗೂ ಸ್ವಚ್ಛಂದತೆಗಳು ತಾಂಡವವಾಡುತ್ತಿದ್ದು, ಇದು ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಕಂಟಕವಾಗಿ ಮಾರ್ಪಟ್ಟಿದೆ. ಯಾವ ಹಾದಿಯಲ್ಲಾದರೂ ಹಣ ಮತ್ತು ಅಧಿಕಾರವನ್ನು ಕೈವಶಪಡಿಸಬೇಕೆಂಬ ಮನುಷ್ಯನ ಹಪಾಹಪಿ ಹಿಂಸೆ,ದಬ್ಬಾಳಿಕೆ ಹಾಗೂ ದಮನಗಳಿಗೆ ಜನರನ್ನು ಪ್ರೇರೇಪಿಸುತ್ತವೆ. ಕೇವಲ ಬೆರಳೆಣಿಕೆಯಷ್ಟು ಜನರು ಇದರ ಫಲಾನುಭವಿಗಳಾದರೆ; ಕೋಟ್ಯಂತರ ಜನರು ಇದರಿಂದಾಗಿ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಹಿಂಸೆ, ಕೊಲೆ, ಮಾದಕ ವಸ್ತುಗಳ ಬಳಕೆ ಜನರಲ್ಲಿ ಮನುಷ್ಯತ್ವವನ್ನು ಇಲ್ಲವಾಗಿಸುತ್ತವೆ. ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬದುಕು ಮತ್ತು ಬೋಧನೆಗಳೇ ದಾರಿದೀಪವಾಗಿವೆ.ಈ ನಿಟ್ಟಿನಲ್ಲಿ ಗಾಂಧೀಜಿಯವರನ್ನು ಕಂಡು ಕೇಳರಿಯದ ಹೊಸ ತಲೆಮಾರಿಗೆ ಗಾಂಧೀಜಿಯವರ ಚಿಂತನೆಗಳು ಸ್ವೀಕೃತವಾಗುವ ರೀತಿಯಲ್ಲಿ ಮರು ವ್ಯಾಖ್ಯಾನಗೊಳಿಸಬೇಕಾದ ಜವಾಬ್ದಾರಿ ನಮಗಿದೆ. 1957 ರಲ್ಲಿ ಆಚಾರ್ಯ ವಿನೋಬಾ ಭಾವೆಯವರಿಂದ ಮಂಜೇಶ್ವರದಲ್ಲಿ ಆರಂಭಿಸಲ್ಪಟ್ಟ ಶಾಂತಿಸೇನೆಯು ಕ್ರಿಯಾತ್ಮಕವಾಗಿ ಮುನ್ನಡೆಯಲು ತೀರ್ಮಾನಿಸಿದೆ. ಹೊಸ ತಲೆಮಾರಿಗೆ ಹಸ್ತಾಂತರಿಸಲ್ಪಟ್ಟ ಗಾಂಧೀಜಿಯವರ ಶಾಂತಿಸೇನಾ ಪರಿಕಲ್ಪನೆಯನ್ನು ರಾಷ್ಟ್ರವ್ಯಾಪಿ ಹರಡುವ ನಿಟ್ಟಿನಲ್ಲಿ ಶಾಂತಿಸೇನೆಯ ಸ್ಥಾಪನಾ ದಿನವಾದ ಆಗಸ್ಟ್ 23 ರಂದು ಮಂಜೇಶ್ವರದಲ್ಲಿ ರಾಷ್ಟ್ರೀಯ ಶಾಂತಿಸೇನಾ ದಿನವನ್ನು ಆಚರಿಸಲು ತೀರ್ಮಾನಿಸಿದ್ದು, ದೇಶ-ವಿದೇಶಗಳ ಸಾವಿರದಷ್ಟು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆಯೆಂದು ಹಿರಿಯ ಗಾಂಧೀವಾದಿ, ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಎನ್.ರಾಧಾಕೃಷ್ಣನ್ ಹೇಳಿದರು.
ಹಿಂಸೆ, ಕೊಲೆ, ಮದ್ಯ-ಮಾದಕವಸ್ತಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತರ ಸಂಗಮ ಹಾಗೂ ವಿನೋಭಾ ವೆಂಕಟೇಶ್ ರಾವ್ ಶಾಂತಿಸೇನಾ ಫೌಂಡೇಶನ್ ವಾರ್ಷಿಕ ಅವಲೋಕನಾ ಸಭೆಯನ್ನು ಗುರುವಾರ ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿಯ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.ಶಾಂತಿ ಸೇನಾ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಚಟುವಟಿಕೆಗಳ ಬಗ್ಗೆ ವಿಸ್ಕøತ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ವಿ.ಕೆ.ಮೋಹನನ್, ಆರ್.ಪಿ.ರವೀಂದ್ರನ್, ಫಾದರ್ ಸ್ಕರಿಯಾ, ಶಿವನ್ ಅರುಣಾಚಲಂ, ರಂಜಿತ್ ಸರಕಾರ್, ಮಮತಾ ದಿವಾಕರ್, ಜೀನ್ ಲವೀನಾ ಮೊಂತೇರೋ, ಶಂಶಾದ್ ಶುಕೂರ್, ಕ್ಯಾಪ್ಟನ್ ನಂಬ್ಯಾರ್, ಪ್ರೊ.ಮೇರಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿವಾಕರ್ ಎಸ್ ಜೆ ಸ್ವಾಗತಿಸಿ, ಉಮ್ಮರ್ ಬೋರ್ಕಳ ವಂದಿಸಿದರು.