ಪೆರ್ಲ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮುಖತಃ ಪತ್ರ ಕಳುಹಿಸಿ ಎಲ್ಲಾ ಗ್ರಾಮಗಳಲ್ಲೂ ಜಲ ಮರುಪೂರಣಕ್ಕೆ ಆದ್ಯತೆ ನೀಡಬೇಕೆಂದು ಆದೇಶ ನೀಡಿದ್ದರೂ ಇದನ್ನು ನಿರ್ಲಕ್ಷ್ಯಿಸಿ ಜಲಮರುಪೂರಣದ ನಿಧಿಯನ್ನು ವ್ಯರ್ಥಗೊಳಿಸುತ್ತಿದೆ ಎಂದು ಬಿಜೆಪಿ ಎಣ್ಮಕಜೆ ಪಂಚಾಯತಿ ಸಮಿತಿ ಹೇಳಿಕೆಯಲ್ಲಿ ಆರೋಪಿಸಿದೆ.
ಎಣ್ಮಕಜೆ ಗ್ರಾಮ ಪಂಚಾಯತಿಯ ಯುಡಿಎಫ್ ನೇತೃತ್ವದ ಆಡಳಿತ 2018-19 ರಲ್ಲಿ ಬಾವಿ ರೀಚಾರ್ಜ್ ಗೆ ದೊರೆತ 21 ಲಕ್ಷ ಮೊತ್ತದ ಯೋಜನೆಯನ್ನು ಆ ಆರ್ಥಿಕ ವರ್ಷದಲ್ಲಿ ಪೂರ್ತಿಗೊಳಿಸದೆ, 2019-20 ರಲ್ಲಿ ಯೋಜನಾ ಪಟ್ಟಿಯಲ್ಲೂ ಸೇರಿಸದೆ ಉಪೇಕ್ಷಿಸಿದುದು ಕಂಡುಬರುತ್ತಿದೆ. ಗ್ರಾ.ಪಂ.ನ ಈ ಹಿಂದಿನ ಅಧ್ಯಕ್ಷೆಯಾದ ರೂಪವಾಣಿ ಆರ್ ಭಟ್ ಅವರ ಆಡಳಿತ ಅವಧಿಯಲ್ಲಿ ಜಿಲ್ಲಾಪಂಚಾಯತಿಯಿಂದ 15 ಲಕ್ಷ ರೂ. ಅನುದಾನ ಹಾಗೂ ಬ್ಲಾಕ್ ಪಂಚಾಯತಿಯಿಂದ 6 ಲಕ್ಷ ರೂ. ಅನುದಾನದ ನೆರವಲ್ಲಿ ಈ ಮಹತ್ವದ ಯೋಜನೆಗೆ ಅನುದಾನ ದೊರಕಿದ್ದು, ವಿವಿಧ ಗ್ರಾಮಸಭೆಗಳಲ್ಲಿ ಇದಕ್ಕಾಗಿ ಫಲಾನುಭವಿ ಪಟ್ಟಿಯೂ ತಯಾರಾಗಿತ್ತು. ಸುಮಾರು 300ಕ್ಕೂ ಮೇಲ್ಪಟ್ಟ ಫಲಾನುಭವಿಗಳು ಈ ಯೋಜನೆಯನ್ನು ನಡೆಸಲು ಆಸಕ್ತಿ ತೋರಿಸಿದ್ದರೂ ವಿವಿಧ ಕಾರಣಗಳನ್ನು ನೀಡಿ ಈ ಯೋಜನೆಯನ್ನು 2019-20 ರ ಆರ್ಥಿಕ ವರ್ಷದ ಯೋಜನೆಯಿಂದ ಉಪೇಕ್ಷಿಸಿದುದು ಜನವಂಚನೆಯಾಗಿದೆ ಎಂದು ಬಿಜೆಪಿ ತಿಳಿಸಿದೆ.
ಗ್ರಾಮ ಪಂಚಾಯತಿ ಕಾರ್ಯದರ್ಶಿಯವರ ಖಾತೆಗೆ ಈಗಾಗಲೇ ಈ ಮೊತ್ತ ನಿಕ್ಷೇಪವಾಗಿದ್ದು ಈ ವರ್ಷದ ಬೇಸಿಗೆಯಲ್ಲಿ ಕೃಷಿ ಹಾಗೂ ಕುಡಿನೀರಿಗಾಗಿ ಜನರ ಹಾಹಾಕಾರದ ಅರಿವಿದ್ದರೂ, ಕುರುಡಾದ ಅಧ್ಯಕ್ಷೆ ಇದರ ಬಗ್ಗೆ ಗಮನ ಹರಿಸದಿರುವುದು ಖೇದಕರ. ಪಂಚಾಯತಿಯಾದ್ಯಂತ ಕೃಷಿಕರ ಗ್ರಾಮಸಭೆಗಳನ್ನು ನಡೆಸುತ್ತಿರುವ ಆಡಳಿತ ವರ್ಗ ಇದಕ್ಕೆ ಉತ್ತರಿಸಬೇಕಾಗಿದೆ. ಬಿಜೆಪಿ ಪ್ರತಿನಿಧಿಗಳು ನಿರಂತರವಾಗಿ ಈ ಯೋಜನೆಯಲ್ಲಿ ಕುಂದುಕೊರತೆಗಳಿದ್ದಲ್ಲಿ ಪರಿಹರಿಸಿ ಜಾರಿಗೊಳಿಸಬೇಕೆಂದು ವಿನಂತಿಸುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವ ಆಡಳಿತ ವರ್ಗ ಈ ಯೋಜನೆಯ ಜಾರಿಯಲ್ಲಿ ಇಚ್ಛಾಶಕ್ಕಿಯ ಕೊರತೆ ತೋರಿಸುತ್ತಿದ್ದು, ಈ ವರ್ಷದ ಯೋಜನೆಯಲ್ಲಿ ಇದನ್ನು ಸೇರಿಸಿ ಜಾರಿಗೊಳಿಸದೆ ಮೊತ್ತವನ್ನು ಸರಕಾರಕ್ಕೆ ಹಿಂದಿರುಗಿಸಿದಲ್ಲಿ ಜನತೆಯನ್ನು ಒಗ್ಗೂಡಿಸಿ ಪ್ರಬಲ ಹೋರಾಟಕ್ಕೆ ಮುಂದಾಗಬೇಕಾದಿತು ಎಂದು ಬಿಜೆಪಿ ಪ್ರತಿನಿಧಿಗಳು ಎಚ್ಚರಿಸಿದ್ದಾರೆ.