ಬದಿಯಡ್ಕ: ಭೂಮಿಯ ಅಂತರ್ಜಲ ಮಟ್ಟದ ವೃದ್ಧಿಗಾಗಿ ಎಲ್ಲೆಡೆ ಬಿದಿರು ಕೃಷಿ ಯೋಜನೆಯ ಸಲುವಾಗಿ ಬಿದಿರು ಕೃಷಿ ಸಂರಕ್ಷಣೆಯ ಕುರಿತು ಗುರುವಾರ ಬದಿಯಡ್ಕ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಜಾಗೃತಿ ತರಗತಿಯನ್ನು ನಡೆಸಲಾಯಿತು. ಎಡಿಸಿ ಜನರಲ್ ಬೆವಿನ್ ಜೋನ್ ವರ್ಗೀಸ್ ಮಾಹಿತಿಯನ್ನು ನೀಡಿದರು. ಬಿದಿರು ಕೃಷಿಯ ಸಂರಕ್ಷಣೆಗಾಗಿ ಅಗತ್ಯವುಳ್ಳ ಜೈವಿಕ ಬೇಲಿಯನ್ನು ನಿರ್ಮಿಸಬೇಕು. ಕಾರ್ಯಕರ್ತರು ಜನತೆಗೆ ಸೂಕ್ತ ಮಾಹಿತಿಯನ್ನು ನೀಡಿ ಜಲಸಂಪನ್ಮೂಲದ ರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆಯಿತ್ತರು.
ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನ್ವರ್ ಓಸೋನ್, ಶ್ಯಾಮಪ್ರಸಾದ ಮಾನ್ಯ, ಸಹಾಯಕ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿದರು. ಗ್ರಾಮಪಂಚಾಯತಿ ಸದಸ್ಯರು, ಮಹಾತ್ಮಾಗಾಂಧಿ ದೇಶೀಯ ಉದ್ಯೋಗ ಖಾತರಿ ಯೋಜನೆಯ ಸದಸ್ಯರು, ಪೆರಡಾಲ ನವಜೀವನ ಶಾಲೆಯ ಸ್ಟೂಡೆಂಟ್ ಪೊಲೀಸ್ ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದುಕೊಂಡರು. ಬದಿಯಡ್ಕ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ 22,000 ಗಿಡಗಳನ್ನು ನೆಟ್ಟು ಬೆಳೆಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ.