ನವದೆಹಲಿ: ತಮ್ಮ ಸಚಿವಾಲಯ ಆವರಣದಲ್ಲಿ ಬಿಸ್ಕೆಟ್ ಗಳ ಮಾರಾಟಕ್ಕೆ ನಿಷೇಧ ಹೇರಿರುವ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್, ಸಚಿವಾಲಯದ ಸಭೆಗಳಲ್ಲಿ ಅಧಿಕಾರಿಗಳಿಗೆ ಮತ್ತು ಅತಿಥಿಗಳಿಗೆ ಕಡಲೆ, ಬಾದಾಮಿ, ಖರ್ಜೂರ ಮತ್ತು ವಾಲ್ನಟ್ ನಂತಹ ಆರೋಗ್ಯಕರ ತಿನಿಸುಗಳನ್ನು ಮಾತ್ರ ನೀಡಬೇಕೆಂದು ಆದೇಶಿಸಿದ್ದಾರೆ.
ಈ ಕುರಿತು ಶುಕ್ರವಾರ ಆದೇಶ ಹೊರಡಿಸಿರುವ ಅವರು, ಅಧಿಕಾರಿಗಳ ಸಭೆಗಳಲ್ಲಿ ಕೇವಲ ಆರೋಗ್ಯಕರ ಸ್ನಾಕ್ಸ್ ಗಳನ್ನು ಮಾತ್ರ ನೀಡಬೇಕು, ಬಿಸ್ಕೆಟ್, ಚಿಪ್ಸ್ ನಂತಹ ತಿನಿಸುಗಳನ್ನು ನೀಡಬಾರದು ಎಂದು ಹೇಳಿದ್ದಾರೆ.
ಇನ್ನು ಮುಂದೆ ಸಭೆಗಳಲ್ಲಿ ಇಲಾಖೆಯ ಕ್ಯಾಂಟೀನ್ ಮೂಲಕ ಬಿಸ್ಕತ್ತುಗಳನ್ನು ನೀಡಲಾಗುವುದಿಲ್ಲ. ಚನ್ನದಾಲ್, ಖರ್ಜೂರ, ಹುರಿದ ಕಡಲೆ, ಬಾದಾಮಿ, ಅಕ್ರೋಟ್ ನಂತಹ ಆರೋಗ್ಯಕರ ತಿನಿಸುಗಳನ್ನು ಪೂರೈಸಲಾಗುವುದು ಎಂದು ಹೇಳಿದೆ. ಅಲ್ಲದೆ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಸಹ ವಿತರಣೆ ಮಾಡುವುದಿಲ್ಲ ಎಂದು ಹೇಳಿದೆ.