ಕಾಸರಗೋಡು: ಪ್ರಕೃತಿಗೆ ಮಹಾವಿಪತ್ತಾಗಿರುವ ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಸರಗೋಡಿನಿಂದ ಕನ್ಯಾಕುಮಾರಿ ವರೆಗೆ ಕಳಿವಂಡಿ(ಆಟದ ಬಂಡಿ) ಪರ್ಯಟನೆ ನಡೆಯಲಿದೆ.
ಮಲಪ್ಪುರಂ ಎಡಪ್ಪಾಲ್ ಎಂಬಲ್ಲಿನ ಕರಕುಶಲ ಪರಿಣತೆ ಎಂ.ಪಿ.ಸಿನಿ ಅವರ ಏಕಾಂಗಿ ಸೈನ್ಯವೇ ಈ ಆಟದ ಬಂಡಿ. ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನತೆಯನ್ನು ಸೆಳೆಯುವಲ್ಲಿ ಆಟದ ಬೊಂಬೆಗಳ ನಿರ್ಮಾಣವನ್ನು ಮಾಧ್ಯಮವಾಗಿಸಿ ಪರ್ಯಟನೆ ನಡೆಸುವ ಈ ಯಾತ್ರೆ ಜೂ.20 ರಂದು ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ.
ಕಸದಿಂದ ರಸ ಎಂಬ ಸಂಕಲ್ಪವನ್ನು ಪ್ರಧಾನವಾಗಿಸಿ ಬಳಕೆ ಮುಗಿದ ನಂತರ ಎಲ್ಲೆಂದರಲ್ಲಿ ಬಿಸುಟುವ ಪ್ಲಾಸ್ಟಿಕ್ ಪೆನ್, ಬಾಟಲಿ, ಆಭರಣ, ಐಸ್ ಕ್ರೀಂ ಕಪ್, ಸ್ಟ್ರಾ, ಪೇಪರ್ ಕಪ್, ವಿದ್ಯುನ್ಮಾನ ಉಪಕರಣಗಳ ಅವಶೇಷಗಳು ಇತ್ಯಾದಿಗಳಿಂದ ಆಟಿಕೆ ತಯಾರಿಸಿ ಮರುಬಳಕೆ ನಡೆಸುವುದು ಇಲ್ಲಿನ ಉದ್ದೇಶ. 8 ರಿಂದ 15 ವರ್ಷ ಪ್ರಾಯದ ಮಕ್ಕಳನ್ನು ಪ್ರಧಾನ ಕೇಂದ್ರವಾಗಿಸಿ ಕಳಿವಂಡಿ ಪರ್ಯಟನೆ ನಡೆಸಲಿದೆ.
ರಾಜ್ಯದ 14 ಜಿಲ್ಲೆಗಳ ಆಯ್ದ ಶಿಕ್ಷಣಾಲಯಗಳಲ್ಲಿ ಒಂದೊಂದು ದಿನ ಬೆಳಗ್ಗಿನಿಂದ ಸಂಜೆ 4 ಗಂಟೆ ವರೆಗೆ 50 ಮಂದಿ ಮಕ್ಕಳಿಗೆ ಪಾಳು ವಸ್ತುಗಳಿಂದ ಆಕರ್ಷಕ ಆಟಿಕೆ ನಿರ್ಮಿಸುವ ತರಬೇತಿ ನೀಡಲಾಗುವುದು. ಆ.18ರಂದು ಕನ್ಯಾಕುಮಾರಿಯಲ್ಲಿ ಪರ್ಯಟನೆ ಸಮಾರೋಪಗೊಳ್ಳಲಿದೆ.
ಮೇಲಂಗೋಡು ಎ.ಸಿ.ಕಣ್ಣನ್ ನಾಯರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರ್ಯಟನೆಗೆ ಚಾಲನೆ ಲಭಿಸಲಿದೆ. ಹರಿತ ಕೇರಳಂ ಮಿಷನ್‍ನ ಪೆನ್ ಫ್ರೆಂಡ್ ಯೋಜನೆಯ ಶಾಲಾ ಮಟ್ಟದ ಉದ್ಘಾಟನೆಯೂ ಇದರ ಜೊತೆಗೆ ನಡೆಯಲಿದೆ.
ಎಂಜಿನಿಯರಿಂಗ್ ಪದವೀಧರೆಯಾಗಿರುವ ಎಂ.ಪಿ.ಸಿನಿ ಅವರು ಈಗಾಗಲೇ ಅಹಿಂಸಾ ಬೊಂಬೆ ನಿರ್ಮಾಣ ಯಜ್ಞ ಯೋಜನೆ ಮೂಲಕ ರಾಜ್ಯದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ , ಕುಟುಂಬಶ್ರೀ, ಸ್ವಯಂ ಸೇವಾ ಸಂಘಟನೆ ಸದಸ್ಯರಿಗೆ ಪ್ಲಾಸ್ಟಿಕ್ ಮರುಬಳಕೆ ವಿದ್ಯೆ ಕಲಿಸುವ ಮೂಲಕ ಗಮನ ಸೆಳೆದವರು.