40 ಯೋಧರ ಸಾವಿಗೆ ಕಾರಣವಾಗಿದ್ದ ಉಗ್ರರ ಕಾರ್ ಬಾಂಬ್ ಆತ್ಮಹತ್ಯಾ ಸ್ಫೋಟ ಪ್ರಕರಣ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ನಡೆದ ಎನ್ಕೌಂಟರ್ ನಲ್ಲಿ ಪುಲ್ವಾಮ ಉಗ್ರ ದಾಳಿಗೆ ಕಾರ್ ನೀಡಿದ್ದ ಉಗ್ರ ಸಜ್ಜದ್ ಭಟ್ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ಬಿಹಾರ ಪಟ್ಟಣದ ಸಮೀಪವಿರುವ ಮರ್ಹಮಾ ಸಂಗಮ್ ಗ್ರಾಮದಲ್ಲಿ ಇಂದು ಮುಂಜಾನೆ ಭದ್ರತಾಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿವೆ. ಇಬ್ಬರು ಅಥವಾ ಮೂವರು ಉಗ್ರರು ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಮನೆಯೊಂದನ್ನು ಸುತ್ತುವರಿದ ಭದ್ರತಾಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಇಬ್ಬರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದವು.
ಮೃತ ಇಬ್ಬರು ಉಗ್ರರ ಪೈಕಿ ಓರ್ವ ಉಗ್ರನ ಗುರುತು ಪತ್ತೆಯಾಗಿದ್ದು, ಈತ ಈ ಹಿಂದೆ 40 ಸೈನಿಕರ ಸಾವಿಗೆ ಕಾರಣವಾಗಿದ್ದ ಪುಲ್ವಾಮ ಉಗ್ರ ದಾಳಿಯ ರೂವಾರಿ ಮತ್ತು ಆತ್ಮಹತ್ಯಾ ದಾಳಿಗೆ ಕಾರಣವಾಗಿದ್ದ ಕಾರನ್ನು ನೀಡಿದ್ದ ಕಾರು ಮಾಲೀಕ ಸಜ್ಜದ್ ಭಟ್ ಎಂದು ತಿಳಿದು ಬಂದಿದೆ.
ಸೋಮವಾರ ನಡೆದಿದ್ದ ಕಾರ್ಯಾಚರಣೆಯಲ್ಲಿ ಮೇಜರ್ ಒಬ್ಬರು ಹುತಾತ್ಮರಾಗಿದ್ದರು. ಈ ಘಟನೆಯಲ್ಲಿ ಒಬ್ಬ ಅಧಿಕಾರಿ ಹಾಗೂ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಬೆನ್ನಲ್ಲೇ ಇಂದು ಮತ್ತೋರ್ವ ಸೈನಿಕ ಹುತಾತ್ಮರಾಗಿದ್ದಾರೆ.