ಬದಿಯಡ್ಕ : ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಿರಲು ನಾವು ಕಠಿಣ ಪರಿಶ್ರಮ ಪಡಬೇಕಾಗಿದೆ. ನಮ್ಮ ಆರೋಗ್ಯದ ಕುರಿತು ನಾವು ಕಾಳಜಿ ವಹಿಸುವಂತೆ ನಮ್ಮ ಪರಿಸರವನ್ನು ಶುಚಿಯಾಗಿಟ್ಟು ರೋಗಾಣುಗಳು ಸೃಷ್ಟಿಯಾಗದಂತೆ, ಹರಡದಂತೆ ಎಚ್ಚರವಹಿಸಬೇಕಾಗಿರುವುದು ನಮ್ಮ ಮೊದಲ ಕರ್ತವ್ಯವಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯಣi ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಶುಕ್ರವಾರ ಮಾನ್ಯ ಸಮುದಾಯ ಹಾಲ್‍ನಲ್ಲಿ ನಡೆದ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದುದ್ದಕ್ಕೂ ಆರೋಗ್ಯವಂತರಾಗಿ ಬಾಳಬೇಕಾದರೆ ನಮ್ಮ ಪರಿಸರ ಹಾಗೂ ಆಹಾರ ರೀತಿಗಳ ಬಗ್ಗೆ ಜಾಗೃತರಾಗಬೇಕು ಎಂದು ಅವರು ತಿಳಿಸಿದರು. ಬದಿಯಡ್ಕ ಗ್ರಾಮಪಂಚಾಯತಿ ವಿದ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪೈವಳಿಕೆ ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಗಣೇಶ ಪ್ರಸಾದ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಆಹಾರ, ಅನ್ನ, ಪಾನೀಯಗಳನ್ನು ನಾವು ಸೇವಿಸುವಾಗ ಅತೀ ಜಾಗರೂಕರಾಗಿರಬೇಕು. ಮಳೆಗಾಲದಲ್ಲಿ ಕುದಿಸಿ ತಣಿಸಿದ ನೀರನ್ನ ಕುಡಿಯಬೇಕು. ಮಳೆಗಾಲದಲ್ಲಿ ಅತೀ ಹೆಚ್ಚು ರೋಗಗಳನ್ನು ಹರಡುವುದು ಸೊಳ್ಳೆಗಳಿಂದಾಗಿವೆ. ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದೆ ಪಾರಾಗಲು ಅಗತ್ಯ ಸೌಲಭ್ಯಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು.
ಬೇಳ ಆಯುರ್ವೇದ ಡಿಸ್ಪೆನ್ಸರಿಯ ವೈದ್ಯೆ ಡಾ. ಕೈರುನ್ನೀಸ, ಮಾನ್ಯ ಶಾಲಾ ಮುಖ್ಯೋಪಾಧ್ಯಾಯ ಟಿ. ಗೋವಿಂದನ್ ನಂಬೂದಿರಿ , ಖಾದರ್ ಮಾನ್ಯ, ಸತೀಶ ಶುಭಹಾರೈಸಿದರು. ಫಾರ್ಮಸಿಸ್ಟ್ ಮೋಹನನ್ ಸ್ವಾಗತಿಸಿ, ಪ್ರಮೋಟರ್ ಹೇಮಲತಾ ವಂದಿಸಿದರು.