ಪೆರ್ಲ: ಇಲ್ಲಿನ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ಈ ವರ್ಷದ ನಾಟ್ಯ-ಹಿಮ್ಮೇಳ ತರಗತಿಗಳ ಪ್ರಾರಂಭೋತ್ಸವವು ಭಾನುವಾರ ಜರಗಿತು. ಮುಂಜಾನೆ ಗಣಹೋಮದೊಂದಿಗೆ ಕಾರ್ಯಕ್ರಮವು ಶುಭಾರಂಭಗೊಂಡಿತು. ಮುಂದೆ ಹೊಸ ವಿದ್ಯಾರ್ಥಿಗಳ ಸೇರ್ಪಡೆ, ನಾಟ್ಯ ತರಬೇತಿ ಜರಗಿತು. ಮಧ್ಯಾಹ್ನ ಭೋಜನಾನಂತರ ಮಕ್ಕಳ ಮೇಳದಿಂದ ಸಂಪೂರ್ಣ ದೇವಿಮಹಾತ್ಮೆ ಎಂಬ ಸುದೀರ್ಘ ಯಕ್ಷಗಾನ ತಾಳಮದ್ದಳೆಯು ಜರಗಿತು.
ಪೇಜಾವರ ವಿಶ್ವೇಶತೀರ್ಥ ಪ್ರಶಸ್ತಿ ಪುರಸ್ಕøತ ಸಂಸ್ಥೆಯಾದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಸ್ಥಾಪಕರಾದ ದ.ಕ.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ನಾಟ್ಯಗುರು ಸಬ್ಬಣಕೋಡಿ ರಾಂ ಭಟ್ ಅವರು ಇಲ್ಲಿ ಯಕ್ಷಗಾನ ನಾಟ್ಯತರಬೇತಿಯನ್ನು ನೀಡುತ್ತಿದ್ದು ಈ ಕೇಂದ್ರವು ಇದೀಗ ಪಡ್ರೆ ಚಂದು ಅವರ ಜನ್ಮಶತಮಾನೋತ್ಸವದ ಸಂಭ್ರಮದಲ್ಲಿದೆ. ಇದೀಗ ಇಲ್ಲಿ ಸುಮಾರು 70ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯವನ್ನು ಅಭ್ಯಸಿಸುತ್ತಿದ್ದಾರೆ. ಅದೇ ರೀತಿ ಇಲ್ಲಿನ ಅನೇಕ ಹಳೆ ವಿದ್ಯಾರ್ಥಿಗಳು ಕಟೀಲು, ಎಡನೀರು, ಹನುಮಗಿರಿ, ಧರ್ಮಸ್ಥಳ, ಕೊಲ್ಲಂಗಾನ, ಮಲ್ಲ, ಕೂಡ್ಲು ಇತ್ಯಾದಿ ಮೇಳಗಳಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಇಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಹಿಮ್ಮೇಳ ತರಬೇತಿಯನ್ನು ನೀಡುತ್ತಿದ್ದಾರೆ. ಹಿರಿಯ ಪ್ರಸಿದ್ಧ ಭಾಗವತರಾದ ಅವರು ಭಾಗವತಿಕೆ ಹಾಗೂ ಚೆಂಡೆಮದ್ದಳೆ ತರಬೇತಿಯನ್ನು ಈ ಇಳಿವಯಸ್ಸಿನಲ್ಲಿಯೂ ನೀಡುತ್ತಿರುವುದು ಮಕ್ಕಳ ಭಾಗ್ಯವಾಗಿದೆ. ಸುಮಾರು 40ರಷ್ಟು ವಿದ್ಯಾರ್ಥಿಗಳು ಇಲ್ಲಿ ಹಿಮ್ಮೇಳ ತರಬೇತಿಯನ್ನು ಪಡೆಯುತ್ತಿದ್ದಾರೆ. ಇಲ್ಲಿ ನಡೆದ ತಾಳಮದ್ದಳೆಯಲ್ಲಿ ತೆಂಕಬೈಲು ಗುರುಗಳ ಶಿಷ್ಯ ವೃಂದದವರು ಹಿಮ್ಮೇಳವನ್ನು ನಡೆಸಿಕೊಟ್ಟರು.