ಕಾಸರಗೋಡು: ಅಭಿವೃದ್ದಿಯಲ್ಲಿ ಅತಿ ಹಿಂದುಳಿದಿರುವ ಗಡಿನಾಡು ಕಾಸರಗೋಡಿನ ಅಭಿವೃದ್ದಿಯ ಕನಸುಗಳೊಂದಿಗೆ ಆರಂಭಿಸಲಾದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಾಮಗಾರಿ ಸುಧೀರ್ಘ ಅವಧಿಯಿಂದ ಕುಂಟುತ್ತಾ ಸಾಗಿ ಇದೀಗ ಒಂದುಹಂತದ ಕಾಮಗಾರಿ ಅಂತಿಮ ಹಂತದಲ್ಲಿ ಬಂದುನಿಂತಿರುವುದು ಭರವಸೆ ಮೂಡಿಸಿದೆ.
ಬದಿಯಡ್ಕ ಗ್ರಾಪಂ ವ್ಯಾಪ್ತಿಯ ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜಿನ ಅಕಾಡೆಮಿಕ್ ಕಟ್ಟಡದ ಕಾಮಗಾರಿ ಅಂತಿಮಹಂತದಲ್ಲಿದ್ದು, ಆಸ್ಪತ್ರೆ ಬ್ಲಾಕ್‍ಗಳ ಉಳಿದ ಕೆಲಸಕಾರ್ಯ ಭರದಿಂದ ಸಾಗುತ್ತಿದೆ. ಅಕಾಡಮಿಕ್ ಕಟ್ಟಡದ ಶೇ 95 ಕಾಮಗಾರಿ ಪೂರ್ಣಗೊಂಡಿದ್ದು, ಕಾಸರಗೋಡು ಅಭಿವೃದ್ಧಿ ಪ್ಯಾಕೆಜ್ ನಲ್ಲಿ ಅಳವಡಿಸಿ ಕಾಮಗಾರಿ ನಡೆಸಲಾಗುತ್ತಿದೆ.
ಆಸ್ಪತ್ರೆಯಲ್ಲಿ ಏನಿದೆ:
ಎರಡು ಬ್ಲಾಕ್‍ಗಳಲ್ಲಾಗಿ ಆಸ್ಪತ್ರೆ ಕಾರ್ಯಾಚರಿಸಲಿದ್ದು, 500 ಹಾಸಿಗೆಗಳ ಕಟ್ಟಡ ನಿರ್ಮಾಣ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಲಾಗಿದೆ. ಆರಂಭದ ಹಂತದಲ್ಲಿ ರಸ್ತೆ, ಆಡಳಿತ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದ್ದು, ಎರಡನೇ ಹಂತದಲ್ಲಿ 37850 ಚ.ಅಡಿ ವಿಸ್ತೀರ್ಣದ ಕಟ್ಟಡ ಆಸ್ಪತ್ರೆ ಬ್ಲಾಕ್‍ಗಳಿಗಾಗಿ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಮೂರನೇ ಹಂತದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ , ಸಿಬ್ಬಂದಿ ಕ್ವಾರ್ಟರ್ಸ್ ನಿರ್ಮಾಣ ಕಾರ್ಯ ನಡೆಯಲಿದೆ.
ಒಂಬತ್ತು ಶಸ್ತ್ರಚಿಕಿತ್ಸಾ ಕೊಠಡಿ, ಲೇಬರ್ ಕಾಂಪ್ಲೆಕ್ಸ್, ಐಸಿಯು, ನರ್ಸರಿ, -ಫಾರ್ಮಸಿ, ಸ್ಟೋರ್ಸ್, ಬ್ಲಡ್‍ಬ್ಯಾಂಕ್, ಲ್ಯಾಬ್, ಸಿಎಸ್‍ಎಸ್‍ಡಿ ಸಹಿತ ಕ್ಯಾಶುವಾಲಿಟಿ ಬ್ಲಾಕ್, ಎಕ್ಸ್-ರೇ, ಎಂ.ಆರ್.ಐ ಸ್ಕ್ಯಾನಿಂಗ್, ಸಿ.ಟಿ ಸ್ಕ್ಯಾನ್, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸಹಿತ ರೇಡಿಯೋಲಜಿ ವಿಭಾಗವನ್ನೊಳಗೊಂಡ ಆಸ್ಪತ್ರೆ ಕಟ್ಟಡ ತಲೆಯೆತ್ತಲಿದೆ. ವೈದ್ಯಕೀಯ ಕಾಲೇಜು ವಠಾರದಲ್ಲಿ 530ಚ.ಮೀ ವಿಸ್ತೀರ್ಣದಲ್ಲಿ ಸುಸಜ್ಜಿತ ವಿದ್ಯುತ್ ಸಬ್‍ಸ್ಟೇಶನ್ ಕಟ್ಟಡ ನಿರ್ಮಾಣ ಕಾರ್ಯವೂ ನಡೆಯಲಿದೆ.
ಅವಲೋಕನ ಸಭೆ:
ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣ ಪ್ರಗತಿಯ ಬಗ್ಗೆ ಅವಲೋನ ನಡೆಸಲು ಇತ್ತೀಚೆಗೆ ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ಸಭೆ ನಡೆಸಲಾಯಿತು.ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ನಬಾರ್ಡ್ ನ ಸಹಾಯದೊಂದಿಗೆ ನಿರ್ಮಿಸಲಾಗುತ್ತಿರುವ ಆಸ್ಪತ್ರೆ ಬ್ಲಾಕ್ ನ ಎರಡನೇ ಹಂತದ ಕಾಂಕ್ರೀಟು ಕಾಮಗಾರಿ ಪೂರ್ಣಗೊಂಡಿದೆ ಎಂದು ನಿರ್ಮಾಣ ಹೊಣೆ ವಹಿಸಿಕೊಂಡಿರುವ `ಕಿಟ್ಕೋ' ದ ಪ್ರತಿನಿಧಿ ಸಭೆಯಲ್ಲಿ ತಿಳಿಸಿದರು. ಈ ಕಟ್ಟಡದ ಸೌಲಭ್ಯ ಬಳಸಿ ಸ್ಪೆಷ್ಯಲೈಸ್‍ಡ್ ವಿಭಾಗ ಆರಂಭಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿದೆ. ಮಳೆ ನೀರು ಸಂಗ್ರಹಿಸಿ ಭೂಗರ್ಭ ಜಲ ಹೆಚ್ಚಳಗೊಳಿಸುವ ಯೋಜನೆ ಜಾರಿಗೊಳಿಸಲು ಭೂಗರ್ಭಜಲ ಇಲಾಖೆ ಜಿಲ್ಲಾ ಅಧಿಕಾರಿಗೆ ಹಾಗೂ ವಿದ್ಯುತ್ ಸಂಪರ್ಕ ಸಂಬಂಧ ಕೆ.ಎಸ್.ಇ.ಬಿ. ಡೆಪ್ಯೂಟಿ ಪ್ರಧಾನ ಇಂಜಿನಿಯರ್‍ಗೆ ಮತ್ತು ಕಿಟ್ಕೋಗೆ ಪ್ರಾಜೆಕ್ಟ್ ಸಿದ್ಧಪಡಿಸಲು ಆದೇಶ ನೀಡಲಾಯಿತು.
ಅಭಿಮತ:
ಎಂಡೋ ದುಷ್ಪರಿಣಾಮಪೀಡಿತ ಪ್ರದೇಶದ ಜನತೆ ಹೆಚ್ಚಿನ ನಿರೀಕ್ಷೆಯಿರಿಸಿಕೊಂಡಿರುವ ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಕಾಡಮಿಕ ಕಟ್ಟಡ ಕಾಮಗಾರಿ ಶೇ. 95ರಷ್ಟು ಪೂರ್ತಿಗೊಂಡಿದ್ದು, ಎರಡನೇ ಹಂತದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಕಾರ್ಯ ಭರದಿಂದ ಸಾಗುತ್ತಿದೆ. ಮೆಡಿಕಲ್ ಕಾಲೇಜು ಆರಂಭಕ್ಕೆ ಇನ್ನು ಯಾವೆಲ್ಲ ಕಾಮಗಾರಿಗಳು ಬಾಕಿಯಿವೆ ಎಂಬ ಬಗ್ಗೆ ಪ್ರಾಜೆಕ್ಟ್ ತಯಾರಿಸುವಂತೆ ಪ್ರಾಜೆಕ್ಟ್ ಕನ್ಸಲ್ಟೆಂಟ್ ಆಗಿರುವ ಕಿಟ್ಕೋ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಡಾ. ಡಿ.ಸಜಿತ್‍ಬಾಬು,
ಜಿಲ್ಲಾಧಿಕಾರಿ. ಕಾಸರಗೋಡು.
(ಚಿತ್ರ ಮಾಹಿತಿ: ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆ ಅಕಾಡಮಿಕ್ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿ.)