ಕಾಸರಗೋಡು: ರಾಜ್ಯ ಸರಕಾರದ ಆಶ್ರಯದಲ್ಲಿ ಇತ್ತೀಚೆಗೆ ಆರಂಭಿಸಲಾದ ಕೇರಳ ಚಿಕನ್ ಯೋಜನೆಯನ್ನು ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಿಗೂ ವಿಸ್ತರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಇದರಂತೆ ಈ ಎರಡು ಜಿಲ್ಲೆಗಳಲ್ಲಿ ಕೋಳಿ ಸಾಕಣೆ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಜೊತೆಗೆ ಮಿತ ದರದಲ್ಲಿ ಕೋಳಿ ಮಾಂಸ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಗುವುದು.
ವಯನಾಡು, ಕಲ್ಲಿಕೋಟೆ, ಮಲಪ್ಪುರಂ ಮತ್ತು ಪಾಲ್ಘಾಟ್ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಈಗಾಗಲೇ ಆರಂಭಿಸಿದ್ದು, ಈ ಎಲ್ಲ ಜಿಲ್ಲೆಗಳಲ್ಲಿಯೂ ಯೋಜನೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಯೋಜನೆಯ ಮತ್ತಷ್ಟು ಯಶಸ್ವಿಗಾಗಿ ರಾಜ್ಯದ ಉಳಿದ ದೊಡ್ಡ ಜಿಲ್ಲೆಗಳಾದ ಕಾಸರಗೋಡು ಹಾಗೂ ಕಣ್ಣೂರಿಗೆ ಈ ಯೋಜನೆಯನ್ನು ವಿಸ್ತರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಜಿಲ್ಲೆಯಲ್ಲಿ ಪ್ರತಿನಿತ್ಯ ಕೋಳಿ ಮಾಂಸದ ಬೆಲೆಯಲ್ಲಿ ಏರಿಕೆ, ಗಮನಾರ್ಹ ವ್ಯಾತ್ಯಾಸವಾಗುವುದು ಸಾಮಾನ್ಯವಾಗಿದೆ. ಅದರಲ್ಲೂ ಮದುವೆ ಸಮಾರಂಭದ ತಿಂಗಳುಗಳಲ್ಲಿ ಕೋಳಿ ಮಾಂಸದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಉಂಟಾಗುತ್ತದೆ. ಈ ಅನಿಯಮಿತ ಬೆಲೆ ಏರಿಕೆಯನ್ನು ತಡೆಗಟ್ಟಲು ಈ ಯೋಜನೆಯು ಗ್ರಾಹಕರಿಗೆ ಅನುಕೂಲವಾಗಲಿದೆ. ಯೋಜನೆಯ ಮೂಲಕ ಕೋಳಿ ಮಾಂಸವನ್ನು ತೆರೆದ ಮಾರುಕಟ್ಟೆಯಲ್ಲಿ ಲಭಿಸುವ ದರಕ್ಕಿಂತ ಕಡಿಮೆ ಬೆಲೆಗೆ ಕೇರಳ ಚಿಕನ್ ಮಾರಾಟ ಕೇಂದ್ರಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಅಗತ್ಯವಿರುವ ಮಾಂಸದ ಕೋಳಿಗಳನ್ನು ಹೆಚ್ಚಾಗಿ ತಮಿಳುನಾಡು ಮತ್ತು ಕರ್ನಾಟಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮಾಂಸಹಾರಿಗಳ ಹೆಚ್ಚಿನ ಬೇಡಿಕೆಯನ್ನು ತಿಳಿದುಕೊಂಡು ಕೋಳಿ ವಿತರಿಸುವ ಸಂಸ್ಥೆಗಳು ಕಾಲಕ್ಕೆ ಅನುಗುಣವಾಗಿ ಬೆಲೆ ಏರಿಕೆ ಮಾಡುತ್ತಿದ್ದಾರೆ. ಇದರಿಂದ ಮಾಂಸಾಹಾರಿಗಳಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಈ ನಷ್ಟವನ್ನು ತಡೆಗಟ್ಟಲು ಕೇರಳ ಚಿಕನ್ ಯೋಜನೆ ಸಹಕಾರಿಯಾಗಲಿದೆ.
ಒಟ್ಟಿನಲ್ಲಿ ಕಾಸರಗೋಡಿನಲ್ಲಿ ಕೇರಳ ಚಿಕನ್ ಯೋಜನೆಯಡಿಯಲ್ಲಿ ಕೋಳಿಮಾಂಸ ಮಾರಾಟ ಕೇಂದ್ರಗಳು ಆರಂಭಗೊಂಡಲ್ಲಿ ಕಡಿಮೆ ಬೆಲೆಯಲ್ಲಿ ಜಿಲ್ಲೆಯಾದ್ಯಂತ ಕೋಳಿಮಾಂಸವು ಗ್ರಾಹಕನ ಕೈಸೇರಲಿದೆ. ಹೊರ ರಾಜ್ಯದ ಕೋಳಿ ವ್ಯಾಪಾರಿಗಳು ನಿಗದಿಪಡಿಸಿರುವ ಹೆಚ್ಚಿನ ದರದಿಂದ ಗ್ರಾಹಕರು ಮುಕ್ತವಾಗಬಹುದು.