ಕುಂಬಳೆ: ಧರ್ಮತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2019 -20 ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ ಶುಕ್ರವಾರ ಶಾಲಾ ಸಭಾಂಗಣದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜೋನ್ ಡಿ ಸೋಜ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಶಾಲಾ ಪ್ರಬಂಧಕಿ ವಿಜಯಶ್ರೀ ಬಿ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಮಾತೃ ಮಂಡಳಿ ಅಧ್ಯಕ್ಷೆ ಭಾರತಿ ಕೋಡಿಮೂಲೆ ಶುಭಾಶಂಸನೆಗೈದರು. ಬಳಿಕ ನೂತನ ಸಮಿತಿ ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಸುಧಾಕರ ರೈ ಪಿ, ಉಪಾಧ್ಯಕ್ಷರಾಗಿ ವಸಂತಿ ಇವರನ್ನೊಳಗೊಂಡ 15 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಮಾತೃ ಮಂಡಳಿ ಅಧ್ಯಕ್ಷೆಯಾಗಿ ನೆಸೀಮಾ, ಉಪಾಧ್ಯಕ್ಷರಾಗಿ ಬೇಬಿ ಇವರನ್ನೊಳಗೊಂಡ 15 ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಅಧ್ಯಾಪಕ ಕೃಷ್ಣ ಪ್ರಸಾದ್ ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಪಾತ್ರದ ಬಗ್ಗೆ ತರಗತಿ ನಡೆಸಿದರು. ಮುಖ್ಯೋಪಾಧ್ಯಾಯ ಯನ್. ಮಹಾಲಿಂಗ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹಾಯಕ ಅಧ್ಯಾಪಕ ರಾಮ್ ಮೋಹನ್ ಸಿ.ಎಚ್ ಗತ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಕಳೆದ ಶೈಕ್ಷಣಿಕ ವರ್ಷ ಯಲ್ ಯಸ್ ಯಸ್ ಮತ್ತು ಯು ಯಸ್ ಯಸ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಸ್ಕಾಲರ್ಶಿಪ್ ಪಡೆದ ಪವನ್ ರಾಮ್ ಯನ್ ಮತ್ತು ಮನೀಶ್ ಯಸ್ ಡಿ ಇವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಹಿರಿಯ ಶಿಕ್ಷಕಿ ರೇವತಿ ಅಮ್ಮ ವಂದಿಸಿದರು. ಸಹಾಯಕ ಅಧ್ಯಾಪಕ ಶ್ರೀನಿವಾಸ ಕೆ.ಯಚ್ ಕಾರ್ಯಕ್ರಮ ನಿರೂಪಿಸಿದರು.