ಶ್ರೀನಗರ: ಈ ಹಿಂದೆ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಇದೀಗ ನಿಜವಾದ ಕರ್ತವ್ಯ ಸಲ್ಲಿಸಲು ಮುಂದಾಗಿದ್ದಾರೆ.
ಭಾರತೀಯ ಸೇನೆಯ ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಿಜವಾದ ಸವಾಲು ಇಂದಿನಿಂದ ಶುರುವಾಗಿದ್ದು, ಧೋನಿ ಕಣಿವೆ ರಾಜ್ಯ ಜಮ್ಮು-ಕಾಶ್ಮಿ?ರದಲ್ಲಿ ಗಸ್ತು ತಿರುಗುವ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಅವಕಾಶ ಕೋರಿದ್ದ ಧೋನಿ ಬೇಡಿಕೆಯನ್ನು ಇತ್ತೀಚೆಗಷ್ಟೆ ಮಾನ್ಯ ಮಾಡಿದ್ದ ಭಾರತೀಯ ಸೇನೆ, ಧೋನಿಯನ್ನು ಜುಲೈ 31ರಿಂದ ಆಗಸ್ಟ್ 15ವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಿತ್ತು. ಹೀಗಾಗಿ ಮುಂದಿನ 15 ದಿನಗಳ ಅವಧಿಯಲ್ಲಿ ಧೋನಿ ಅರೆಸೇನಾಪಡೆಯ ವಿಕ್ಟರ್ ಫೋರ್ಸ್ ನೊಂದಿಗೆ ಗಸ್ತು ತಿರುಗಲಿದ್ದಾರೆ. ಅಲ್ಲದೆ ಧೋನಿ ಇದೇ ವಿಕ್ಟರ್ ಫೋರ್ಸ್ ಸೈನಿಕರೊಂದಿಗೇ ಇರಲಿದ್ದು, ಸೈನಿಕರು ನಿರ್ವಹಿಸುವ ಎಲ್ಲಾ ಕೆಲಸಗಳನ್ನೂ ಮಾಡಲಿದ್ದಾರೆ. ಇನ್ನು ಧೋನಿ ಅವರಿಗೆ ಇತರೆ ಸೇನಾಧಿಕಾರಿಗಳಂತೆ ಒಂದು ಎಕೆ 47 ಬಂದೂಕು ನೀಡಲಿದ್ದು, ಅದರೊಂದಿಗೆ ಬುಲೆಟ್ ಗಳು ತುಂಬಿರುವ ಮೂರು ಮ್ಯಾಗಜಿನ್ ಅನ್ನೂ ಕೂಡ ನೀಡಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಜೊತೆಗೆ ಧೋನಿ ತಮ್ಮ ಕರ್ತವ್ಯದ ಸಂದರ್ಭದಲ್ಲಿ ಕಾಶ್ಮೀರದಲ್ಲಿರುವ ವಿವಿಧ ಸೇನಾ ಕ್ಯಾಂಪ್ ಗಳಿಗೆ ಭೇಟಿ ನೀಡಲಿದ್ದು, ಸೈನಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಅಲ್ಲಿ ಸೇನೆ ನಡೆಸುತ್ತಿರುವ ಶಾಲೆಗಳಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲಿರುವ ಧೋನಿ ಮಕ್ಕಳೊಂದಿಗೆ ಬೆರೆತು ವಿವಿಧ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲ್ಲಿದ್ದಾರೆ. ಇದಲ್ಲದೆ ಧೋನಿ ಕಾಶ್ಮೀರದ ಐದು ಸ್ಥಳೀಯ ಕ್ರಿಕೆಟ್ ತಂಡಗಳೊಂದಿಗೆ ಕ್ರಿಕೆಟ್ ಸರಣಿ ಕೂಡ ಆಡಲಿದ್ದಾರೆ.
ಧೋನಿಯನ್ನು 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಳಿಸಲಾಗಿತ್ತು. 2015ರಲ್ಲಿ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್ ತರಬೇತಿ ಕೇಂದ್ರದಲ್ಲಿ 5 ತರಬೇತಿ ಪೂರ್ಣಗೊಳಿಸುವ ಮೂಲಕ ಅರ್ಹತೆ ಪಡೆದ ಪ್ಯಾರಾಟ್ರೂಪರ್ ಆಗಿ ಹೊರಹೊಮ್ಮಿದ್ದರು. ಕಪಿಲ್ ದೇವ್ ಬಳಿಕ ಸೇನಾಸಮವಸ್ತ್ರ ಧರಿಸಿದ ಭಾರತ ಕ್ರಿಕೆಟ್ ತಂಡದ 2ನೇ ಆಟಗಾರ ಧೋನಿ ಆಗಿದ್ದಾರೆ.