HEALTH TIPS

ಕರಿಂಬಿಲ ಗುಡ್ಡೆ ಕುಸಿತದ ಭೀತಿಯಿಂದ 6ನೇ ದಿನವೂ ವಾಹನ ಸಂಚಾರ ಮೊಟಕು ಬದಿಯಡ್ಕದಲ್ಲಿ ನಡೆದ ಸರ್ವಪಕ್ಷ ಸಭೆ- ಲಘುವಾಹನ ಸಂಚಾರಕ್ಕೆ ಅನುಮತಿ?!

Top Post Ad

Click to join Samarasasudhi Official Whatsapp Group

Qries

   
     ಬದಿಯಡ್ಕ: ಕರಿಂಬಿಲದಲ್ಲಿ ಗುಡ್ಡೆ ಕುಸಿದು ಬೀಳುತ್ತಿರುವ ಹಿನ್ನೆಲೆಯಲ್ಲಿ ಸೃಷ್ಟಿಯಾದ ಅಪಾಯದ ಭೀತಿಯಿಂದಾಗಿ ಬದಿಯಡ್ಕ-ಪೆರ್ಲ ದಾರಿಯಲ್ಲಿ ಆರುದಿನಗಳಿಂದ ಮೊಟಕುಗೊಂಡಿದ್ದ ವಾಹನ ಸಂಚಾರ ಸೋಮವಾರದಿಂದ ಪುನರಾರಂಭಗೊಳಿಸುವ ಸಾಧ್ಯತೆಯಿದೆ.
ಬದಿಯಡ್ಕ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅವರ ನೇತೃತ್ವದಲ್ಲಿ ಶನಿವಾರ ಸಂಜೆ ನಡೆದ ಸರ್ವಪಕ್ಷ ಸಭೆಯಲ್ಲಿ ವಾಹನ ಸಂಚಾರ ಪುನರಾರಂಭಗೊಳಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಬದಿಯಡ್ಕದಿಂದ ಪೆರ್ಲಕ್ಕೆ ಬಸ್‍ಗಳ ನೇರ ಸಂಪರ್ಕ ಇರುವುದಿಲ್ಲ. ಬದಿಯಡ್ಕದಿಂದ ಪೆರ್ಲಕ್ಕೆ ತೆರಳುವ ಬಸ್‍ಗಳು ಕರಿಂಬಿಲದಲ್ಲಿ ಮಣ್ಣು ಕುಸಿಯುತ್ತಿರುವ ಸ್ಥಳದ ವರೆಗೆ ಮಾತ್ರ ಸಂಚರಿಸಲಿವೆ. ಅದೇ ರೀತಿ ಕರಿಂಬಿಲ ಸಂಕದ ಬಳಿಯಿಂದ ಪೆರ್ಲಕ್ಕೆ ಬೇರೆ ಬಸ್‍ಗಳು ಸಂಚಾರ ನಡೆಸಲಿದ್ದು, ಪ್ರಯಾಣಿಕರು ಒಂದು ಬಸ್‍ನಿಂದ ಇಳಿದು ಮುಂದಕ್ಕೆ ನಡೆದು ಮತ್ತೊಂದು ಬಸ್‍ನಲ್ಲಿ ಪ್ರಯಾಣಿಸಬೇಕಾಗಿದೆ.
     ಸುರಕ್ಷತಾ ಕ್ರಮದಂಗವಾಗಿ ಬೆಳಿಗ್ಗೆ ಹಾಗೂ ಸಂಜೆ ಕರಿಂಬಿಲದಲ್ಲಿ ಪೊಲೀಸರನ್ನು ನೇಮಿಸಲಾಗುವುದು. ಮಕ್ಕಳು ಹಾಗೂ ಹಿರಿಯರಿಗೆ ರಸ್ತೆದಾಟಲು ಪೊಲೀಸರು ನೆರವಾಗಲಿದ್ದಾರೆ. ಈ ದಾರಿಯಲ್ಲಿ ಸೃಷ್ಟಿಯಾದ ಸಂಚಾರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಸಂಜೆ 6 ಗಂಟೆ ತನಕ ಮಾತ್ರ ಈ ರೀತಿಯ ವ್ಯವಸ್ಥೆ ಜ್ಯಾರಿಯಲ್ಲಿರುತ್ತದೆ.
     ಕಾಸರಗೋಡಿನಿಂದ ಪುತ್ತೂರಿಗೆ ತೆರಳುವ ಸರಕಾರಿ ಬಸ್‍ಗಳು ಇದೀಗ ಸಂಚರಿಸುವಂತೆ ಬದಿಯಡ್ಕದಿಂದ ಕನ್ನೆಪ್ಪಾಡಿ, ಏಳ್ಕಾನ, ಉಕ್ಕಿನಡ್ಕ ವೈದ್ಯಕೀಯ ಕಾಲೇಜು ರಸ್ತೆಯಲ್ಲಿ ಸಾಗಿ ಪೆರ್ಲಕ್ಕೆ ಸಂಪರ್ಕಿಸಿ ಪ್ರಯಾಣ ಮುಂದುವರಿಸಬೇಕಾಗಿದೆ.
     ಕರಿಂಬಿಲ ರಸ್ತೆಗೆ ಬೀಳುವ ಗುಡ್ಡೆಯ ಮಣ್ಣನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳ್ಳುವವರೆಗೆ ಇದೇ ಸ್ಥಿತಿ ಮುಂದುವರಿಯಲಿದೆ. ರಸ್ತೆಗೆ ಬೀಳುವ ಮಣ್ಣನ್ನು ತೆಗೆಯುವ ಕೆಲಸ ಎರಡು ದಿನಗಳಲ್ಲಿ ಆರಂಭಿಸಲಾಗುವುದು ಎಂದು ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಲಾಗಿದೆ. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದ್ದರು. ಪೊಲೀಸ್ ಅಧಿಕಾರಿಗಳು, ವಿದ್ಯುತ್ ಇಲಾಖೆ, ಜನಪ್ರತಿನಿಧಿಗಳು ಹಾಗೂ ರಾಜಕೀಯ ನೇತಾರರು ಭಾಗವಹಿಸಿದ್ದರು.
          ಸಭೆಯನ್ನು ಬಹಿಷ್ಕರಿಸಿದ ಬಿಜೆಪಿ :
  ಇದೇ ವೇಳೆ ಬಿಜೆಪಿ ಸಭೆಯನ್ನು ಬಹಿಷ್ಕರಿಸಿತ್ತು. ಬದಿಯಡ್ಕ-ಪೆರ್ಲ ರಸ್ತೆಯಲ್ಲಿ ವಾಹನ ಸಂಚಾರ ಮೊಟಕುಗೊಂಡು ಹಲವು ದಿನಗಳಾದರೂ ಪರಿಹಾರ ಕಲ್ಪಿಸಲು ಸಂಬಂಧಪಟ್ಟವರು ವಿಫಲರಾಗಿದ್ದಾರೆಂದು ಆರೋಪಿಸಿ ಬಿಜೆಪಿ ಸಭೆಯನ್ನು ಬಹಿಷ್ಕರಿಸಿತ್ತು. ಸೋಮವಾರದೊಳಗೆ ಸಂಚಾರ ಸಮಸ್ಯೆಗೆ ಪರಿಹಾರ ಕಾಣದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ತಿಳಿಸಿತ್ತು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries