ಬದಿಯಡ್ಕ : ಗುಡ್ಡೆ ಕುಸಿತದಿಂದಾಗಿ ವಾಹನ ಸಂಚಾರ ಮೊಟಕುಗೊಂಡ ಬದಿಯಡ್ಕ-ಪೆರ್ಲ ರಸ್ತೆಯ ಕರಿಂಬಿಲ ಮೂಲಕ ಜನರು ಹಾಗೂ ಕಿರು ವಾಹನಗಳ ಸಂಚಾರ ಸೋಮವಾರದಿಂದ ಬೆಳಿಗ್ಗೆ ಆರಂಭಗೊಂಡಿದ್ದರೂ 11 ಗಂಟೆ ವೇಳೆಗೆ ಜಿಲ್ಲಾಕಾರಿಯವರ ಆದೇಶದಂತೆ ಪೊಲೀಸರು ಪುನಃ ರಸ್ತೆಗೆ ತಡೆ ನಿರ್ಮಿಸಿದರು. ಇದರಿಂದಾಗಿ ಶಾಲಾ ಮಕ್ಕಳು, ಸಾರ್ವಜನಿಕರು ಪರದಾಡುವಂತಾಯಿತು.
ಕಳೆದ ಸೋಮವಾರ ಸಂಜೆ ವೇಳೆ ರಸ್ತೆಗೆ ಗುಡ್ಡೆ ಕುಸಿತವುಂಟಾಗಿ ಈ ಮೂಲಕದ ವಾಹನ ಸಂಚಾರ ಪೂರ್ಣವಾಗಿ ಮೊಟಕುಗೊಂಡಿತ್ತು. ಅಧಿಕಾರಿಗಳ ಕಡೆಯಿಂದ ಸೂಕ್ತ ಕ್ರಮವುಂಟಾಗಲಿಲ್ಲ. ಇದರಿಂದ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ತಾತ್ಕಾಲಿಕವಾಗಿ ರಸ್ತೆ ತೆರೆದುಕೊಡಲು ಶಾಸಕ ಎನ್.ಎ. ನೆಲ್ಲಿಕುನ್ನು ಶನಿವಾರ ನಡೆಸಿದ ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದರಂತೆ ಪೆರ್ಲ ಭಾಗದಿಂದ ಬರುವ ಬಸ್‍ಗಳು ಕರಿಂಬಿಲ ಸೇತುವೆ ತನಕವೂ, ಬದಿಯಡ್ಕದಿಂದ ತೆರಳುವ ಬಸ್‍ಗಳು ಕರಿಂಬಿಲ ವರೆಗೆ ಸಂಚಾರ ನಡೆಸಿದವು. ಒಂದು ಬಸ್ ಇಳಿದು ಸುಮಾರು 100 ಮೀಟರ್ ನಡೆದು ಮತ್ತೊಂದು ಬಸ್‍ಗೆ ಹತ್ತಿ ಪ್ರಯಾಣಿಸಬೇಕಾಗಿದೆ. ಇದೇ ವೇಳೆ ಕೆಲವು ದ್ವಿಚಕ್ರ ವಾಹನಗಳನ್ನು ಸಂಚರಿಸಲು ಬಿಡಲಾಗಿದೆ. ಆದರೆ ಬೆಳಿಗ್ಗೆ 11 ಗಂಟೆಯಿಂದ ಪುನಃ ರಸ್ತೆಗೆ ತಡೆಯನ್ನಿರಿಸಿ ಪೊಲೀಸರು ಕಾವಲು ನಿಂತಿದ್ದಾರೆ.
ಜಿಲ್ಲಾಧಿಕಾರಿಯಿಂದ ಕಠಿಣ ಸೂಚನೆ:
ಈ ಮಧ್ಯೆ ಸೋಮವಾರ ಒಂದು ಕಡೆ ಬಸ್ ಇಳಿದು ಒಂದಷ್ಟು ನಡೆದು ಮತ್ತೊಂದು ಬಸ್ ಏರುವ ವ್ಯವಸ್ಥೆಗೆ ಬೆಳಿಗ್ಗೆ 10ರ ವೇಳೆಗೆ ಜಿಲ್ಲಾಧಿಕಾರಿಗಳು ಕಠಿಣ ತಡೆ ನೀಡಿರುವುದಾಗಿ ತಿಳಿದುಬಂದಿದೆ. ತೀವ್ರ ಆತಂಕಕಾರಿಯಾದ ರಸ್ತೆಯ ಮೇಲೆ ಕಾಲ್ನಡಿಗೆಯಲ್ಲೂ ಸಂಚರಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಾರ್ವಜನಿಕರು ಪ್ರಜ್ಞಾವಂತರಾಗಿ ವರ್ತಿಸಿ ಸಹಕರಿಸಬೇಕೆಂದು ಪೋಲೀಸರ ಮೂಲಕ ಮತ್ತೆ ಸಂಚಾರ ತಡೆಹಿಡಿಯಲಾಯಿತು.