ಬದಿಯಡ್ಕ: ಅನೇಕ ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ಏತಡ್ಕದ ಶ್ರೀ ಸದಾಶಿವ ದೇವರಿಗೆ ಹಿರಿಯರ ಕಾಲದಲ್ಲಿ ನಡೆದುಕೊಂಡು ಬಂದಂತೆ ಭಾನುವಾರ ಮಧ್ಯಾಹ್ನ ಮಹಾಪೂಜೆಯ ಸಂದರ್ಭದಲ್ಲಿ ಊರಪರವೂರ ಭಕ್ತಾದಿಗಳ ಪ್ರಾರ್ಥನೆಯೊಂದಿಗೆ ಹಲಸಿನ ಹಣ್ಣಿನ ಅಪ್ಪಸೇವೆಯನ್ನು ನೆರವೇರಿಸಲಾಯಿತು.
ಹಿಂದಿನ ಕಾಲದಲ್ಲಿ ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ಶ್ರೀ ದೇವರಿಗೆ ಹಲಸಿನ ಹಣ್ಣಿನ ಅಪ್ಪಸೇವೆಯನ್ನು ಕೈಗೊಳ್ಳಲಾಗುತ್ತಿತ್ತು. ಅದು ಇಂದಿಗೂ ಪ್ರಾಕ್ ಪದ್ಧತಿಯಂತೆ ನಡೆದುಬರುತ್ತಿದೆ. ಕಷ್ಟಕಾಲದಲ್ಲಿ ಜನರ ಹಸಿವು ನೀಗಿಸಿದ ಹಲಸಿನ ಮರವನ್ನು ಜನರು ಸದಾ ಸ್ಮರಿಸಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಹಿರಿಯರು ಹಲಸಿನ ಹಣ್ಣಿನ ಅಪ್ಪ ಸೇವೆಯನ್ನು ಆಚರಣೆಗೆ ತಂದಿದ್ದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಮಂಗಳೂರಿನ ವಿದ್ಯಾಶೆಣೈ ದೂರದ ಕೆನಡಾದಿಂದ ಸಂಪರ್ಕಿಸಿ ತಮ್ಮ ಮೊಮ್ಮಗುವಿನ ಕುರಿತು ವಿಶೇಷ ಅಪ್ಪ ಸೇವೆ ಮಾಡಿಸಿದ್ದರು. ಮಂಗಳೂರು, ಕಾಸರಗೋಡು, ಬದಿಯಡ್ಕದ ಹಾಗೂ ಊರಪರವೂರ ಅನೇಕ ಭಕ್ತಾದಿಗಳು ಮಹಾಪೂಜೆಯ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ನ್ಯಾಯವಾದಿ ಎಂ. ನಾರಾಯಣ ಭಟ್, ಡಾ. ವೈ.ಸುಬ್ರಾಯ ಭಟ್, ಮುರಲೀಕೃಷ್ಣ ಮಾಣಿತ್ತೋಡಿ ಗದ್ದೆಮನೆ ಹಾಗೂ ಅನೇಕ ಭಕ್ತಾದಿಗಳು ಶ್ರೀ ದೇವರಿಗೆ ಹಲಸಿನ ಹಣ್ಣನ್ನು ಸಮರ್ಪಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕರು ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದರು. ಆಡಳಿತ ಮೊಕ್ತೇಸರ ಡಾ. ಪ್ರಕಾಶ್ ವೈ.ಎಚ್., ಚಂದ್ರಶೇಖರ ಏತಡ್ಕ, ವೈ.ವಿ.ಸುಬ್ರಹ್ಮಣ್ಯ, ವೈ. ಶ್ರೀಧರ ಹಾಗೂ ಭಕ್ತಾದಿಗಳು ವಿಶೇಷ ಅಪ್ಪಸೇವೆಯಲ್ಲಿ ಪಾಲ್ಗೊಂಡರು. ಪಾಕತಜ್ಞ ಜಯರಾಮ ಅನವುತ್ತಡ್ಕ ಅಪ್ಪ ತಯಾರಿಯಲ್ಲಿ ನೇತೃತ್ವವಹಿಸಿದರು.