ಬದಿಯಡ್ಕ: ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ದ ನೀರ್ಚಾಲು ಘಟಕದ ನೇತೃತ್ವದಲ್ಲಿ ಬಿಎಂಎಸ್ ಸ್ಥಾಪನಾ ದಿನದಂಗವಾಗಿ ಕುಟುಂಬ ಸಂಗಮ ಕಾರ್ಯಕ್ರಮವು ಹಿಂದೂ ಸೇವಾ ಪ್ರತಿಷ್ಠಾನದ ನೇತೃತ್ವದ ಕನ್ನೆಪ್ಪಾಡಿ `ಆಶ್ರಯ' ಆಶ್ರಮದಲ್ಲಿ ಜರಗಿತು.
ಬಿಎಂಎಸ್ ನಿರ್ಮಾಣ ಘಟಕ ಜಿಲ್ಲಾ ಉಪಾಧ್ಯಕ್ಷ ಐತ್ತಪ್ಪ ಕುಲಾಲ್ ನಾರಾಯಣಮಂಗಲ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ದೇಶದ ಅತೀ ದೊಡ್ಡ ಕಾರ್ಮಿಕ ಸಂಘಟನೆಯ ಸ್ಥಾಪನಾ ದಿನವನ್ನು ಕಾರ್ಮಿಕರು ಕುಟುಂಬದೊಂದಿಗೆ ಹಂಚಿಕೊಂಡಿರುವುದು ಶ್ಲಾಘನೀಯವಾಗಿದೆ. ಕುಟುಂಬದ ಏಕತೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.
ಕುಟುಂಬ ಪ್ರಬೋಧನದ ಮಂಗಳೂರು ವಿಭಾಗ ಸಂಯೋಜಕ್ ಗಜಾನನ ಪೈ ಮಂಗಳೂರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಕುಟುಂಬವನ್ನು ಯಾವ ರೀತಿ ಮುನ್ನಡೆಸಬೇಕು ಎಂಬ ಬಗ್ಗೆ ತರಗತಿಯನ್ನು ನೀಡಿ ಮನೆಯ ಹಿರಿಯರನ್ನು ನಾವು ಗೌರವಿಸಿದರೆ ನಮ್ಮ ಮಕ್ಕಳು ನಮ್ಮನ್ನು ಗೌರವಿಸುತ್ತಾರೆ. ನಮ್ಮ ನಡವಳಿಕೆಯೇ ಮಕ್ಕಳಲ್ಲಿ ಕೇಂದ್ರೀಕೃತವಾಗುತ್ತದೆ. ಮನೆಯ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕಾದರೆ ನಾವು ಸಂಸ್ಕಾರವಂತರಾಗಬೇಕು. ಮನೆಯ ಪರಿಸರದ ಜನತೆಯನ್ನು ಒಂದುಗೂಡಿಸಿ ಸತ್ಸಂಗಗಳನ್ನು ಮಾಡಬೇಕು. ತನ್ಮೂಲಕ ಉತ್ತಮ ವಾತಾವರಣವನ್ನು ಸೃಷ್ಟಿಸಬೇಕು ಎಂದು ಅವರು ತಿಳಿಸಿದರು.
ಬಿಎಂಎಸ್ ತಲೆಹೊರೆ ಘಟಕ ಅಧ್ಯಕ್ಷ ಗಣೇಶ್ ಕಿಳಿಂಗಾರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಉದನೇಶ್ವರ ಬಾಲಗೋಕುಲದ ಮಕ್ಕಳು ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಭಾರತೀಯ ಮಜ್ದೂರ್ ಸಂಘದ ಬದಿಯಡ್ಕ ವಲಯ ಅಧ್ಯಕ್ಷ ತಾರಾನಾಥ್ ವೇದಿಕೆಯ ಹಿರಿಯರನ್ನು ಪರಿಚಯಿಸಿ ಸ್ವಾಗತಿಸಿದರು. ಬಾಲಗೋಕುಲ ಮತ್ತು ಆಶ್ರಯದ ಶಿಶು ಮಂದಿರದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಎಂ.ರಾಮಪ್ಪ ಮಂಜೇಶ್ವರ, ಬಾಲಕೃಷ್ಣ ಏಣಿಯರ್ಪು, ಆಶ್ರಯ ಜನಸೇವ ವಿಶ್ವಸ್ಥ ನಿಧಿಯ ವಿಶ್ವಸ್ಥರಾದ ಶ್ರೀಕೃಷ್ಣ ಭಟ್ ಪುದುಕೋಳಿ, ಗಣೇಶಕೃಷ್ಣ ನೀರ್ಚಾಲು, ಬಿಎಂಎಸ್ ಪುತ್ತಿಗೆ ಪಂಚಾಯತಿ ಕಾರ್ಯದರ್ಶಿ ರಾಮಚಂದ್ರ ಉಪಸ್ಥಿತರಿದ್ದರು. ಬಿಎಂಎಸ್ ನೀರ್ಚಾಲು ಘಟಕದ ಗೋಪಾಲಕೃಷ್ಣ ನಾಯಕ್, ಸತೀಶ, ಕೃಷ್ಣ, ಪ್ರಸಾದ, ಸುಜಿತ್ ಕುಮಾರ್, ಸಂತೋಷ್ ಕುಮಾರ್, ಗಿರೀಶ, ಅಶ್ವಥ್ ಹಾಗೂ ಶಿವರಾಜ್‍ನ ಕುಟುಂಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.