ಪೆರ್ಲ: ಸಾಂಪ್ರದಾಯಿಕ ಕೃಷಿ ಉಳಿಸುವಿಕೆ, ಬೆಳೆಸುವಿಕೆ ಉದ್ದೇಶವನ್ನಿಟ್ಟು ಮಳೆ-ಬೆಳೆ- ನಾಟಿ ಮಹೋತ್ಸವ- ಕೆಸರು ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮವು ಇಂದು ಬೆಳಿಗ್ಗೆ 9 ರಿಂದ ಸ್ವರ್ಗ ಸಮೀಪದ ಬಜಕುಡೆ ಕೊರಗಪ್ಪ ನಾಯ್ಕ ಇವರ ಗದ್ದೆಯಲ್ಲಿ ನಡೆಯಲಿದೆ.
ಸ್ವರ್ಗ ವಾರ್ಡು ಮಟ್ಟದ ಕುಟುಂಬಶ್ರೀ ಎ.ಡಿ.ಯಸ್ ನೇತೃತ್ವದಲ್ಲಿ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಹಾಗೂ ಮಾತೃಭೂಮಿ ಸ್ವರ್ಗ ಇದರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎಣ್ಮಕಜೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ ಉದ್ಘಾಟಿಸುವರು. ಕುಟುಂಬಶ್ರೀ ಸಿ.ಡಿ.ಯಸ್ ಉಪಾಧ್ಯಕ್ಷೆ ಶಶಿಕಲಾ ಕೆ, ಎ.ಡಿ.ಯಸ್ ಅಧ್ಯಕ್ಷೆ ವಲ್ಸಮ್ಮ, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ್ ಮೊದಲಾದವರು ಉಪಸ್ಥಿತರಿರುವರು. ಭತ್ತದ ಕೃಷಿಕರಿಗೆ ಅಭಿನಂದನೆ, ಕೆಸರು ಗದ್ದೆಯಲ್ಲಿ ಕುಟುಂಬಶ್ರೀ ಸದಸ್ಯೆಯರಿಗೆ,ಬಾಲಸಭಾ ಮಕ್ಕಳಿಗೆ, ಯುವಕರಿಗೆ ಹಗ್ಗ ಜಗ್ಗಾಟ,ಲಿಂಬೆ ಚಮಚ ಓಟ, ಬಲೂನು ಒಡೆಯುವ ಸ್ಪರ್ಧೆ ನಡೆಯಲಿದೆ.