ಚಿಕ್ಕಮಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ್ ಅಕಾಲ ಮೃತ್ಯುವಶರಾಗಿರುವ ಹಿನ್ನೆಲೆಯಲ್ಲಿ ಕಾಫಿ ಡೇ ಎಂಟರ್‍ಪ್ರೈಸಸ್ ಎಸ್.ವಿ.ರಂಗನಾಥ್ ಅವರನ್ನು ನೂತನ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಂಪನಿಯು ನಿತಿನ್ ಬಾಗ್ಮನೆ ಅವರನ್ನು ಸಹ ಮಧ್ಯಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದೆ.
ಎಸ್‍ವಿ ರಂಗನಾಥ್ (ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕ), ನಿತಿನ್ ಬಾಗ್ಮನೆ (ಸಿಒಒ) ಮತ್ತು ಆರ್ ರಾಮ್ ಮೋಹನ್ ಅವರನ್ನೊಳಗೊಂಡ ಕಾರ್ಯಕಾರಿ ಸಮಿತಿಯು ಈ ಮುನ್ನ ಸಿಇಓ ಅವರಿಗಿದ್ದ ಜವಾಬ್ದಾರಿಯನ್ನು ನಿಭಾಯಿಸಲಿದೆ ಎಂದು ಕಂಪನಿ ಹೇಳಿದೆ.
ಭಾರತದ ಅತಿದೊಡ್ಡ ಕಾಫಿ ಸಂಸ್ಥೆಯ ಮಾಲೀಕ ಮತ್ತು ಸ್ಥಾಪಕ ಕೆಜಿ ಕಾಫಿ ಡೇ (ಸಿಸಿಡಿ) ವಿ.ಜಿ ಸಿದ್ಧಾರ್ಥ ಅವರ ಶವವನ್ನು ಬುಧವಾರ ಬೆಳಿಗ್ಗೆ 6: 50ರ ಸುಮಾರಿಗೆ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪತ್ತೆ ಮಾಡಲಾಗಿದೆ.ಸೋಮವಾರ ಸಂಜೆ ಮಂಗಳೂರು ಸಮೀಪದ ನೇತ್ರಾವತಿ ಸೇತುವೆ ಮೇಲಿಂದ ನಾಪತ್ತೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಕಾಫಿ ಡೇ ಮುಖ್ಯಸ್ಥ ಸಿದ್ದಾರ್ಥ್ ನದಿಗೆ ಹಾರಿ ಪ್ರಾಣ ಬಿಟ್ಟಿದ್ದರು.