ಬದಿಯಡ್ಕ: ಬದಿಯಡ್ಕ-ಪೆರ್ಲ ರಸ್ತೆ ಕರಿಂಬಿಲದಲ್ಲಿ ಗುಡ್ಡ ಕುಸಿದು ಉಂಟಾದ ಸಾರಿಗೆ ಸಂಚಾರ ತಡೆಯನ್ನು ಪರಿಹರಿಸಿ ಅತ್ಯಂತ ಶೀಘ್ರದಲ್ಲಿ ಸಂಚಾರಯೋಗ್ಯವನ್ನಾಗಿಸಬೇಕೆಂದು ಯುವ ಕಾಂಗ್ರೆಸ್ ಕಾಸರಗೋಡು ವಿಧಾನ ಸಭಾ ಕಾರ್ಯದರ್ಶಿ ಎಂ.ಎಚ್.ಆರಿಸ್ ಶೇಣಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಅವೈಜ್ಞಾನಿಕವಾದ ರೀತಿಯಲ್ಲಿ ಮಾಡಿದ ಕೆಲಸದ ಪರಿಣಾಮವಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವೇ ಗುಡ್ಡ ಜರಿತಕ್ಕೆ ಕಾರಣ ಎಂದೂ ಅವರು ತಿಳಿಸಿದ್ದಾರೆ. ಇದಕ್ಕೆ ಕಾರಣಕರ್ತರಾದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದ್ದಾರೆ.
ಕಳೆದ ಐದು ದಿನಗಳಲ್ಲಾಗಿ ಗುಡ್ಡ ಕುಸಿದು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಶಾಲಾ ವಿದ್ಯಾರ್ಥಿಗಳು ಮೊದಲಾದ ಪ್ರಯಾಣಿಕರಿಗೆ ತೊಂದರೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಜನರ ಪ್ರಯಾಣಕ್ಕೆ ಸುರಕ್ಷೆಯನ್ನೀಯುವ ಅಥವಾ ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿಸುವ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಿಲ್ಲ. ಇದು ನಿಜಕ್ಕೂ ಖಂಡನೀಯವಾಗಿದೆ ಎಂದು ಎಂ.ಎಚ್.ಆರಿಸ್ ಶೇಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.