ಬದಿಯಡ್ಕ: ಅತಿವೃಷ್ಟಿ,ಅನಾವೃಷ್ಟಿ ಪ್ರಕೃತಿ ಸಹಜ. ಬಾಡುವುದು,ಚಿಗುರುವುದು ಕೃಷಿಯ ಅಂತಃಸತ್ವ. ಎದೆಗುಂದದೆ ಮುನ್ನಡೆಯುವವನೇ ನಿಜವಾದ ಕೃಷಿಕ ಎಂದು ಪ್ರಗತಿಪರ ಕೃಷಿಕ ಸತ್ಯನಾರಾಯಣ ಡಿ.ಕೆ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಡಾ.ವೇಣುಗೋಪಾಲ್ ಕಳೆಯತ್ತೋಡಿ ಅವರ ಗ್ರೀನ್ ವ್ಯೂ ಮನೆಯಲ್ಲಿ ಭಾನುವಾರ ಏರ್ಪಡಿಸಲಾದ ಕೃಷಿ ದರ್ಶನ,ಸಂವಾದ ಮತ್ತು ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಕೃಷಿ ಭೂಮಿಯಲ್ಲಿ ಮರಗಳನ್ನು ಬೆಳೆಸುವುದರಿಂದ ಪರಿಸರ ಸಂರಕ್ಷಣೆಯ ಜೊತೆಗೆ ಹೇಗೆ ಆರ್ಥಿಕವಾಗಿ ಲಾಭಗಳಿಸಬಹುದು ಎಂಬುದನ್ನು ಅವರು ಸೋದಾಹರಣವಾಗಿ ವಿವರಿಸಿದರು.ಅರಣ್ಯ ನಾಶವನ್ನು ತಡೆಗಟ್ಟಲು ಪರಿಣಾಮಕಾರಿ ಕಾನೂನಿನ ಅನುಷ್ಠಾನದ ಅಗತ್ಯವಿದೆ ಎಂದರು.
ಗ್ರಾ.ಪಂ. ಸದಸ್ಯ ಎಸ್.ಮೊಹಮ್ಮದ್ ಅವವರು ಅಬ್ದುಲ್ ರಹಮಾನ್ ಹಾಜಿ ಅವರಿಗೆ ಸಸಿ ಹಸ್ತಾಂತರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅವರು ಮಾತನಾಡಿ ಇಂದಿನ ದಿನಗಳಲ್ಲಿ ಜಲ ಮರುಪೂರಣ ಮತ್ತು ಮರ ಬೆಳೆಸುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು. ಗ್ರಾ.ಪಂ. ಸದಸ್ಯೆ ಎಲಿಝಬೆತ್ ಕ್ರಾಸ್ತ ಶುಭಾಶಂಸನೆಗೈದರು.
ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಮಾತನಾಡಿ, ಜನರ ಸಹಭಾಗಿತ್ವ ಇದ್ದರೆ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳೊಡನೆ ಸಂವಾದ ನಡೆಯಿತು.ಸಂವಾದದಲ್ಲಿ ಪಾಲ್ಗೊಂಡ ಕೃಷಿಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ವೈಷ್ಣವಿ,ಅತ್ರೇಯಿ,ದೀಪ್ತಿ ಪ್ರಾರ್ಥನೆ ಹಾಡಿದರು.ಡಾ.ವೇಣು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ವಂದಿಸಿದರು.ಕಾರ್ಯಕ್ರಮದ ನೆನಪಿಗಾಗಿ ಗಿಡ ನೆಡಲಾಯಿತು.ಭಾಗವಹಿಸಿದವರಿಗೆ ಅರಣ್ಯ ಇಲಾಖೆಯಿಂದ ದೊರೆತ 200 ಸಸಿಗಳನ್ನು ವಿತರಿಸಲಾಯಿತು.
ಸಭಾ ಕಾರ್ಯಕ್ರಮಕ್ಕೆ ಮೊದಲು ಆತಿಥೇಯರ ಕೃಷಿ ಕ್ಷೇತ್ರವನ್ನು ವೀಕ್ಷಿಸಲಾಯಿತು. ಅವರ ಉತ್ತಮ ಕೃಷಿಯ ಬಗ್ಗೆ ನೋಡುಗರು ಮೆಚ್ಚುಗೆ ವ್ಯಕ್ತ ಪಡಿಸಿದರು.