ಬದಿಯಡ್ಕ: ನ್ಯಾಯಯುತವಾಗಿ ಕನ್ನಡಿಗರಿಗೆ ದೊರಕಬೇಕಾದ ಸೌಲಭ್ಯಗಳನ್ನು ಸಂಘಟಿತರಾಗಿ ಹೋರಾಟದ ಮೂಲಕ ಪಡೆಯುವ ಸ್ಥಿತಿಗೆ ಕಾಸರಗೋಡಿನ ಕನ್ನಡಿಗರ ಸ್ಥಿತಿ ತಲುಪಿದೆ ಎಂದು ಕನ್ನಡ ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಹೇಳಿದರು.
ಕನ್ನಡ ಹೋರಾಟ ಸಮಿತಿಯ ಆಶ್ರಯದಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿ ಮಟ್ಟದ ಕನ್ನಡಿಗರ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸ್ಥಿತಿಯಲ್ಲಿ ಕನ್ನಡಿಗರೆಲ್ಲ ಒಗ್ಗಟ್ಟಾಗಿ ಭಾಷೆ, ಸಂಸ್ಕøತಿಯ ಉಳಿವಿಗಾಗಿ ಸಂಘಟಿತರಾಗಬೇಕೆಂದು ಅವರು ತಿಳಿಸಿದರು.
ಬದಿಯಡ್ಕ ಗ್ರಾಮ ಪಂಚಾಯತಿ ಮಟ್ಟದ ಕನ್ನಡ ಹೋರಾಟ ಸಮಿತಿಯ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾಗಿ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ದಾಮೋದರ ಮಾಸ್ತರ್ ಅಗಲ್ಪಾಡಿ, ನವೀನ ಮಾಸ್ತರ್ ಮಾನ್ಯ, ಶಂಕರ ಶರ್ಮ, ಕಾರ್ಯದರ್ಶಿಯಾಗಿ ರವಿಕಾಂತ ಕೇಸರಿ ಕಡಾರು, ಜೊತೆ ಕಾರ್ಯದರ್ಶಿಯಾಗಿ ಸುಂದರ ಬಾರಡ್ಕ, ಬಾಲಕೃಷ್ಣ ಆಚಾರ್ಯ, ಕೋಶಾಧಿಕಾರಿಯಾಗಿ ಶ್ಯಾಮ ಆಳ್ವ ಕಡಾರು ಮತ್ತು 15 ಮಂದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಸಾಮಾಜಿಕ ಮುಂದಾಳು ಎಂ.ಎಚ್.ಜನಾರ್ಧನ, ಮೈರ್ಕಳ ನಾರಾಯಣ ಭಟ್, ಪಿಲಿಂಕಲ್ಲು ಕೃಷ್ಣ ಭಟ್, ನಿವೃತ್ತ ಹಿಂದಿ ಅಧ್ಯಾಪಕ ಕೃಷ್ಣ ಭಟ್, ನವೀನ ಮಾಸ್ತರ್ ಮಾನ್ಯ, ಶಂಕರ ಶರ್ಮ ಮೊದಲಾದವರು ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ ಮಂಡಿಸಿದರು. ಬೇ.ಸೀ.ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು.