ಮಂಜೇಶ್ವರ: ಕುಳೂರಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತುಳುನಾಡಿನ ಪರಂಪರೆಯನ್ನು ನೆನಪಿಸುವ ವಿಶಿಷ್ಟ ಕಾರ್ಯಕ್ರಮ ಆಟಿದ ಕೂಟ ನಡೆಯಿತು.
ತುಳುನಾಡಿನ ಸಂಸ್ಕೃತಿಯನ್ನು, ಪರಂಪರೆಯನ್ನು ಪ್ರತಿಬಿಂಬಿಸುವ ಆಟಿದ ಕೂಟ ಕಾರ್ಯಕ್ರಮದಲ್ಲಿ ಹಿಂದಿನ ತಲೆಮಾರಿನವರು ಆಟಿ ತಿಂಗಳಲ್ಲಿ ಅನುಭವಿಸುತ್ತಿದ್ದ ಕಷ್ಟಗಳು, ಆಹಾರದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸುತ್ತಮುತ್ತಲ ಪರಿಸರದಲ್ಲಿ ಲಭ್ಯವಾಗುವ ಸೊಪ್ಪು ತರಕಾರಿಗಳು, ಗಡ್ಡೆ ಗೆಣಸುಗಳು, ಕಾಯಿಪಲ್ಲೆಗಳನ್ನು ಉಪಯೋಗಿಸಿ ತಯಾರಿಸುತ್ತಿದ್ದ ತಿಂಡಿ ತಿನಿಸುಗಳ ಕುರಿತು ಅರಿವನ್ನು ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ನಡೆಸಿದ ಆಟಿದ ಕೂಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತುಳುನಾಡಿನಲ್ಲಿ ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ತಯಾರಿಸುವ ಪತ್ರೊಡೆ, ಹಲಸಿನ ಹಣ್ಣಿನ ಗಟ್ಟಿ, ಒಂದೆಲಗ ಚಟ್ನಿ, ಪೂಂಬೆ ಚಟ್ನಿ, ತಗತೆ ಪಲ್ಯ, ಮೆಂತೆ ಮಣ್ಣಿ, ಉಪ್ಪಿನಲ್ಲಿ ಹಾಕಿದ ಹಲಸಿನ ಹಣ್ಣಿನ ಪಲ್ಯ (ಉಪ್ಪಡ್ ಪಚ್ಚಿಲ್), ನುಗ್ಗೆಸೊಪ್ಪು ಪಲ್ಯ, ಬಾಳೆ ದಿಂಡು ಹಾಗೂ ಪಚ್ಚೆ ಹೆಸರು ಗಸಿ, ರಾಗಿ ಮಣ್ಣಿ, ಹುರುಳಿ ಚಟ್ನಿ, ಅರಶಿನ ಎಲೆ ಅಡೆ, ಡ್ರೈ ಪತ್ರೊಡೆ, ಮಾವಿನ ಕಾಯಿ ಚಟ್ನಿ, ದೀವಿ ಹಲಸು ಪಲ್ಯ, ಹಲಸಿನ ಹಣ್ಣಿನ ರೆಚ್ಚೆಯ ಚಟ್ನಿ, ಹಲಸಿನ ಎಲೆಯ ಮೂಡೆ, ಮೆಂತೆ ಪಚ್ಚೆ ಹೆಸರು ಗಂಜಿ, ಡ್ರೈ ಹುರುಳಿ ಚಟ್ನಿ, ಹಲಸಿನ ಹಣ್ಣಿನ ಪಾಯಸ, ಅಕ್ಕಿಯ ಉಂಡೆ, ಮಂಡಕ್ಕಿ ಉಂಡೆ, ಗೋಳಿಬಜೆ, ಪೂರಿ ಮೊದಲಾದ ಆಹಾರ ವಸ್ತುಗಳನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದ ತಯಾರಿಸಿ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಸಹ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.