ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಯಲ್ಲಿನ ತಿದ್ದುಪಡಿಗಳನ್ನು ಅಂಗೀಕರಿಸಿದ್ದಕ್ಕಾಗಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶವನ್ನು ಲೂಟಿ ಮಾಡುವ ಭ್ರಷ್ಟರಿಗೆ ಸಹಾಯ ಮಾಡಲು ಆರ್‍ಟಿಐ ಕಾಯ್ದೆಯನ್ನು ಅನ್ನು ದುರ್ಬಲಗೊಳಿಸಲಾಗಿದೆ ಎಂದು ಶನಿವಾರ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ ದೇಶವನ್ನು ಲೂಟಿ ಮಾಡುವ ಭ್ರಷ್ಟರಿಗೆ ಸಹಾಯ ಮಾಡಲು ಆರ್‍ಟಿಐ ಅನ್ನು ದುರ್ಬಲಗೊಳಿಸಿದೆ. ವಿಚಿತ್ರವೆಂದರೆ ಸಾಮಾನ್ಯವಾಗಿ ಭ್ರಷ್ಟಾಚಾರ ವಿರೋದ್ಧ ಧ್ವನಿಯೆತ್ತುತ್ತಿದ್ದ ಗುಂಪು ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಸಂಸತ್ತು ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಎರಡು ದಿನಗಳ ನಂತರ, ಶಾಸನವನ್ನು ಸದನದ ಆಯ್ಕೆ ಸಮಿತಿಗೆ ಕಳುಹಿಸಬೇಕೆಂಬ ಪ್ರತಿಪಕ್ಷದ ಬೇಡಿಕೆಯನ್ನು ತಿರಸ್ಕರಿಸಿರುವುದನ್ನು ರಾಹುಲ್ ಟೀಕಿಸಿದ್ದಾರೆ. ಲೋಕಸಭೆ ಸೋಮವಾರ ತಿದ್ದುಪಡಿಗಳನ್ನು ಅಂಗೀಕರಿಸಿದರೆ, ರಾಜ್ಯಸಭೆಯು ತಿದ್ದುಪಡಿ ಮಸೂದೆಯನ್ನು ಗುರುವಾರ ಅಂಗೀಕರಿಸಿತು. ಮಸೂದೆಯನ್ನು ಸಂಸತ್ತಿನ ಆಯ್ಕೆ ಸಮಿತಿಗೆ ಕಳುಹಿಸುವ ನಿರ್ಣಯವನ್ನು ಸಂಸತ್ತು ತಿರಸ್ಕರಿಸಿದೆ.
ಈ ಹಿಂದೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಆರ್‍ಟಿಐ ಕಾಯ್ದೆ ತಿದ್ದುಪಡಿಗಾಗಿ ಮೋದಿ ಸರ್ಕಾರವನ್ನು ಟೀಕಿಸಿದ್ದರು ಮತ್ತು ಪಾರದರ್ಶಕತೆ ಕಾನೂನು 'ಅಳಿವಿನ ಅಂಚಿನಲ್ಲಿದೆ' ಎಂದು ಆರೋಪಿಸಿದ್ದರು.
ಐತಿಹಾಸಿಕ ಮಾಹಿತಿ ಹಕ್ಕು (ಆರ್‍ಟಿಐ) ಕಾಯ್ದೆ, 2005 ಅನ್ನು ಸಂಪೂರ್ಣವಾಗಿ ನಾಶಮಾಡಲು ಕೇಂದ್ರ ಸರ್ಕಾರವು ಉತ್ಸಾಹ ತೋರುತ್ತಿದೆ ಎಂಬುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ವ್ಯಾಪಕವಾದ ಸಮಾಲೋಚನೆಗಳ ನಂತರ ಸಿದ್ಧಪಡಿಸಿದ ಮತ್ತು ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದ ಈ ಕಾನೂನು ಈಗ ಬೆಲೆ ಕಳೆದುಕೊಂಡಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದರು.