ಕೃತಿ*: ಪಡುಗಡಲ ತೆರೆಗಳತ್ತ ಒಂದು ನೋಟ
ಕವಿ: ಡಾ.ಸುರೇಶ್ ನೆಗಲಗುಳಿ
ವಿಮರ್ಶಾ ಬರಹ:ಚೇತನಾ ಕುಂಬಳೆ
ಇತ್ತೀಚಿನ ದಿನಗಳಲ್ಲಿ ಗಜಲ್ ನ ಗಂಧ ದಕ್ಷಿಣ ಕನ್ನಡಕ್ಕೂ ಅಲ್ಲಿಂದ ಕೇರಳದ ಕಾಸರಗೋಡಿಗೂ ಹರಡುತ್ತಿರುವುದು, ಇಲ್ಲಿಯವರಿಗೆ ಗಜಲ್ ನ ಪರಿಚಯ ಆಗುತ್ತಿರುವುದು ಸಂತಸದ ವಿಷಯ. ಮಂಗಳೂರಿನಲ್ಲಿ ಗಜಲ್ ಪ್ರಕಾರವನ್ನು ಓದುಗರಿಗೆ ಪರಿಚಯಿಸುತ್ತಿರುವವರಲ್ಲಿ ಒಬ್ಬರು ನಮ್ಮವರೇ ಆದ ಡಾ| ಸುರೇಶ್ ನೆಗಳಗುಳಿಯವರು. ಮೊದಲು ಬರಹದ ಮೂಲಕ ಪರಿಚಿತರಾದ ಡಾ|. ಸುರೇಶ್ ಅವರು ನಂತರ ಹಲವಾರು ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಅದರಲ್ಲೂ ಕವಿಗೋಷ್ಠಿಗಳಲ್ಲಿ ಅವರೊಂದಿಗೆ ಭಾಗವಹಿಸುವ ಅವಕಾಶ ಲಭಿಸಿದೆ. ಲಭಿಸುತ್ತಿದೆ. ಇವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಕವಿ. ಇತ್ತೀಚೆಗೆ ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವುದು ನಮ್ಮ ಹೆಮ್ಮೆಯ ವಿಷಯ. ಚುಟುಕು ಹನಿಗವನ, ಕವಿತೆ ಗಜಲ್ ರುಬಾಯಿ ಹೀಗೆ ಹಲವಾರು ಪ್ರಕಾರಗಳಲ್ಲಿ ಬರೆಯುತ್ತಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನೆಲ್ಲ ಬರವಣಿಗೆಗೆ ಮೀಸಲಿಟ್ಟು ದಿನಕ್ಕೊಂದು, ಒಂದಕ್ಕಿಂತ ಹೆಚ್ಚು ಬರಹಗಳನ್ನು ಓದುಗರ ಮುಂದಿಡುತ್ತಾರೆ. ಇವರನ್ನು ಆಶುಕವಿಯೆಂದೇ ಹೇಳಬಹುದು. ಇವರು ಕ್ಷಣ ಮಾತ್ರದಲ್ಲಿ ಕವಿತೆಯೋ ಗಜಲನ್ನೋ ರಚಿಸುವ ಸಾಮಥ್ರ್ಯ ಹೊಂದಿರುವರು. ಅವರ ಪ್ರಥಮ ಸಂಕಲನ 'ಧೀರ ತಮ್ಮನ ಕಬ್ಬ' ಮಂಕುತಿಮ್ಮನ ಕಗ್ಗ ಮಾದರಿಯ 80 ಹನಿಗಳನ್ನೊಳಗೊಂಡು 2005ರಲ್ಲಿ ಬಿಡುಗಡೆಗೊಂಡಿತು.2015 ರಲ್ಲಿ 160 ಹನಿಗಳನ್ನೊಳಗೊಂಡ ಮತ್ತೊಂದು ಸಂಕಲನ ಬಿಡುಗಡೆಗೊಂಡಿತು. 2009ರಲ್ಲಿ ತುಷಾರ ಮಾಸ ಪತ್ರಿಕೆಯಲ್ಲಿ ಬಹುಮಾನಿತ ಚಿತ್ರಕವನಗಳಲ್ಲಿ ಆಯ್ದ 30 ಕವನಗಳ ಸಂಕಲನ 'ತುಷಾರ ಬಿಂದು' ಇವರ ಮತ್ತೊಂದು ಕೃತಿ. 2018ರಲ್ಲಿ ಗೋವಿನ ಮಹತ್ವ ಸಾರುವ 100 ಚುಟುಕುಗಳನ್ನೊಳಗೊಂಡ 'ಗೋಗೀತೆ' ಎಂಬ ಚುಟುಕು ಸಂಕಲನವನ್ನು ಪ್ರಕಟಿಸಿರುವರು. 2018ರಲ್ಲಿ 'ಪಡುಗಡಲ ತೆರೆಮಿಂಚು' ಎಂಬ ಗಜಲ್ ಸಂಕಲವನ್ನೂ ಪ್ರಕಟಿಸಿದರು.
ಗಜಲ್ ಗಳ ಎಲ್ಲ ನಿಯಮಗಳನ್ನು ತಿಳಿದುಕೊಂಡು ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತುಳು ಹಾಗೂ ಹವ್ಯಕ ಭಾಷೆಯಲ್ಲೂ ಗಜಲ್ ರಚನೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಗಜಲ್ ನಲ್ಲಿ ಹಲವು ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ತಮ್ಮ ಗಜಲ್ ಸಂಕಲನ 'ಪಡುಗಡಲ ತೆರೆಮಿಂಚು'ನ್ನು "ಮನ ತುಂಬಿ ಕೇಳುವ, ಎದೆ ತುಂಬಿ ಹಾಡುವ ಗಜಲ್ ಪ್ರೇಮಿಗಳಿಗೆ ಹಾಗೂ ಡಾ| ಗೋವಿಂದ ಹೆಗಡೆ ಯವರ ನೇತೃತ್ವದಲ್ಲಿರುವ 'ನಮ್ಮ ಪ್ರೀತಿಯ ಗಜಲ್' ಬಳಗಕ್ಕೆ ಈ ಸಂಕಲನವನ್ನು ವಿಶೇಷವಾಗಿ ಅರ್ಪಿಸಿರುವುದು ಖುಷಿಯ ವಿಚಾರ. 'ಪಡುಗಡಲ ತೆರೆಮಿಂಚು' ಗಜಲ್ ಸಂಕಲನದಲ್ಲಿ ಕನ್ನಡ,ತುಳು, ಹವ್ಯಕ ಮೂರು ಭಾಷೆಗಳಲ್ಲಿ ರಚಿಸಿದ ಗಜಲ್ ಗಳಿದ್ದು ಒಂದು ಅಪೂರ್ವ ಕೃತಿಯೆನ್ನಬಹುದು.
ಈ ಸಂಕಲನಕ್ಕೆ ಪತ್ರಕರ್ತರಾದ ಗಣೇಶ ಪ್ರಸಾದ್ ಪಾಂಡೇಲು ಅವರು ಮುನ್ನುಡಿ ಬರೆದಿದ್ದಾರೆ. 'ನಮ್ಮ ಪ್ರೀತಿಯ ಗಜಲ್' ವಾಟ್ಸಪ್ ಬಳಗದ ಸದಸ್ಯೆಯಾದ ಸುಜಾತ ಲಕ್ಮನೆಯವರು ಬೆನ್ನುಡಿ ಬರೆದಿರುವುದು ಸಂತಸದ ವಿಷಯ.
ಇವರ ಗಜಲ್ ಗಳಲ್ಲಿ ಗಜಲ್ ನ ಮೂಲಕವೇ ದೇವರಿಗೆ, ಒಲವಿನ ಜೀವಗಳಿಗೆ, ಗುರುಗಳಿಗೆ ಕೃತ ಜ್ಞತೆ ಸಲ್ಲಿಸಿದ್ದಾರೆ. ಹಾಗೆಯೇ ಗಜಲ್ ನ ನಿಯಮಗಳನ್ನು ಗಜಲ್ ನ ಮೂಲಕವೇ ಹೇಳುವ ಪ್ರಯತ್ನ ಮಾಡಿದ್ದಾರೆ. ಇವರ ಗಜಲ್ ನಲ್ಲಿ ಸೂರ್ಯ ಚಂದ್ರ ನದಿ ಕಡಲು, ಭೂಮಿ ಆಕಾಶ , ಮಳೆ ಮುಜಾನೆ ಇರುಳು , ಬೆಳಕು ಕತ್ತಲು, ಪ್ರಕೃತಿ ಪ್ರೀತಿ. ಪ್ರೇಮ ವಿರಹ ರಾಜಕೀಯ, ನಾಟಕ ಸಾಹಿತ್ಯ ಕನ್ನಡ ಭಾಷೆ. ಧರ್ಮ,ಹಣ್ಣು. ಗೆಳತಿ , ಜನ್ಮಭೂಮಿ, ಕರ್ನಾಟಕದ ಸೌಂದರ್ಯ, ವರ್ತಮಾನದ ಸ್ಥಿತಿಗತಿಗಳು ಹೀಗೆ ಹಲವು ಕಂಡ, ಅನುಭವಿಸಿದ ವಿಷಯಗಳ ಅನಾವರಣವಿದೆ.ಅವರು ಅಬ್ಬಕ್ಕ ರಾಜಕೀಯ ವ್ಯಕ್ತಿಗಳಾದ ಮೋದಿ , ವಾಜಪೇಯಿಯವರ ಬಗ್ಗೆಯೂ ಗಜಲ್ ರಚಿಸಿರುವುದನ್ನು ಗಮನಿಸಬಹುದು.
ಒಂದು ಗಜಲ್ ನಲ್ಲಿ ಅವರು ಮನುಷ್ಯನ ಕುರಿತು
" ಮತಿವಂತನಾಗು ಮನುಜ, ಸ್ಥಿತಿವಂತನಾಗು
ಬರೆವಂಥವನು ಆಗು ಮೆರೆವಂಥವನು ಆಗು" ಎಂದು ಹೇಳುತ್ತಾರೆ
ಒಂದೆಡೆ ಎಲ್ಲಾ ಸಾಲುಗಳಲ್ಲೂ ಕೇವಲ ನಾಲ್ಕು ಪದಗಳನ್ನಿಟ್ಟುಕೊಂಡು ಗಜಲ್ ರಚಿಸುತ್ತಾರೆ.
ಉದಾ: " ಮುಳುಗುವ ಹಡಗು ಅಪ್ರಿಯವೇಕೆ
ಇಳಿಯುವ ಸೂರ್ಯ ಸಪ್ರಿಯ ಏಕೆ"
ಅವರ ಗಜಲ್ ಗಳಲ್ಲಿ ಗಮನಿಸಿದರೆ ಕೆಲವೊಂದು ಸಣ್ಣ ಸಾಲುಗಳಿವೆ. ಕೆಲವೊಂದು ತುಂಬ ದೀರ್ಘವಾದವುಗಳಿವೆ, ಕೆಲವೆಡೆ ಎರಡು ರೀತಿಯ ಸಾಲುಗಳನ್ನು ಕಾಣಬಹುದು. ಸಂಕಲನದುದ್ದಕ್ಕೂ ಅವರದ್ದೇ ಒಂದು ಶೈಲಿ ಇರುವುದನ್ನು ಗಮನಿಸಬಹುದು. ಅವರ ಮನದ ಕಡಲಲ್ಲಿ ಭಾವದಲೆಗಳು ಸದ್ದು ಮಾಡುತ್ತಿರಲಿ. ಲೇಖನಿಯಿಂದ ಇನ್ನಷ್ಟು ಬರಹಗಳು ಮೂಡಲಿ, ಅವರ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿರಲಿ..
ವಿಮರ್ಶಾ ಬರಹ:ಚೇತನಾ ಕುಂಬ್ಳೆ