ಮಂಜೇಶ್ವರ: ರಾಜ್ಯದ ಕೊರಗ ಸಮುದಾಯದಲ್ಲೇ ಮೊತ್ತಮೊದಲ ಬಾರಿಗೆ ಉನ್ನತ ವಿದ್ಯಾಭ್ಯಾಸಗೈದು ಎಂ.ಫಿಲ್ ಪದವಿ ಪಡೆದ ಮೀಂಜದ ಮೀನಾಕ್ಷಿ ಬೊಡ್ಡೋಡಿ ಅವರಿಗೆ ಕೊನೆಗೂ ಸರ್ಕಾರಿ ನೌಕರಿ ಪ್ರಾಪ್ತವಾಗುವ ಮೂಲಕ ಹೊಸ ಹೆಜ್ಜೆಗೆ ಪಾದಾರ್ಪಣೆ ಮಾಡಲಿದ್ದಾರೆ.
ಕುಟುಂಬಶ್ರೀ ಜಿಲ್ಲಾ ಮಿಷನ್ ಮೂಲಕ ಜಾರಿಗೊಳಿಸಲಾಗುವ ವಿಶೇಷ ಕೊರಗ ಜನಾಂಗ ಅಭಿವೃದ್ದಿ ಯೋಜನೆಯ ಮೇಲ್ವಿಚಾರಕಿಯಾಗಿ ಮೀನಾಕ್ಷಿ ಬೊಡ್ಡೋಡಿ ಅವರಿಗೆ ಉದ್ಯೋಗ ಒದಗಿಸಲಾಗಿದೆ. ಕುಟುಂಬಶ್ರೀ ಜಿಲ್ಲಾ ಮಿಷನ್ ಕಾರ್ಯಾಲಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಿಷನ್ ಸಂಯೋಜನಾಧಿಕಾರಿ ಟಿ.ಟಿ.ಸುರೇಂದ್ರನ್ ಅವರು ಮೀನಾಕ್ಷಿ ಅವರಿಗೆ ಉದ್ಯೋಗ ಸಮ್ಮತಿ ಪತ್ರ ಹಸ್ತಾಂತರಿಸಿದರು.
ಕೊರಗ ಸಮುದಾಯ ಅತ್ಯಧಿಕ ಸಂಖ್ಯೆಯಲ್ಲಿರುವ ಮೀಂಜ ಗ್ರಾ.ಪಂ. ಕೇಂದ್ರೀಕರಿಸಿ ಮೀನಾಕ್ಷಿ ಕಾರ್ಯನಿರ್ವಹಿಸಲಿದ್ದಾರೆ. ಕೊರಗ ಸಮುದಾಯದ ಸಮಗ್ರ ಅಭಿವೃದ್ದಿಗಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಜಾರಿಗೊಳಿಸುವ ಬಹುನಿರೀಕ್ಷಿತ ವಿಶೇಷ ಯೋಜನೆಗಳ ಸಮರ್ಪಕ ಅನುಷ್ಠಾನದ ಹೊಣೆ ಮೀನಾಕ್ಷಿಯವರ ಹೆಗಲಿಗೇರಲಿದೆ. ಮೀನಾಕ್ಷಿಯವರ ವಿದ್ಯಾಭ್ಯಾಸ ಸಾಧನೆ ಹಾಗೂ ಬಳಿಕ ಲಭ್ಯವಾದ ಸುಭದ್ರ ಉದ್ಯೋಗವು ಆ ಜನಾಂಗದ ಇತರ ಯುವ ಸಮೂಹಕ್ಕೆ ಪ್ರೇರಣೆಯಾಗಲಿದೆ ಎಂದು ಸಂಯೋಜನಾಧಿಕಾರಿ ಟಿಟಿ ಸುರೇಂದ್ರನ್ ಅವರು ಭರವಸೆ ವ್ಯಕ್ತಪಡಿಸಿರುವರು.
ಬಸ್ ನಿರ್ವಾಹಕರಾಗಿರುವ ಪತಿ ರತ್ನಾಕರ ಹಾಗೂ ಪುತ್ರ ಮೋಕ್ಷಿತ್ ಅವರೊಂದಿಗೆ ಮೀಂಜದ ಪುಟ್ಟ ಮನೆಯಲ್ಲಿ ಈವರೆಗೆ ಬೀಡಿ ಕಟ್ಟಿ ಬದುಕು ಸಾಗಿಸುತ್ತಿದ್ದ ಮೀನಾಕ್ಷಿ, ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಎಂ.ಎ ಪದವಿ ಗಳಿಸಿ ಬಳಿಕ ಕಣ್ಣೂರು ವಿವಿಯಿಂದ ಎಂ.ಪೀಲ್ ಪದವಿಯನ್ನು ಪ್ರಸ್ತುತ ಸಾಲಿನಲ್ಲಿ ಗಳಿಸಿದ್ದರು. ಜಿಲ್ಲಾ ಕೊರಗ ಅಭಿವೃದ್ದಿ ಸಂಘದ ಅಧ್ಯಕ್ಷೆಯಾಗಿರುವ ಮೀನಾಕ್ಷಿ ಅವರಿಗೆ ಇದೀಗ ಲಭ್ಯವಾಗಿರುವ ಅದೇ ಜನಾಂಗದ ಅಭಿವೃದ್ದಿಗಿರುವ ಯೋಜನೆಯಲ್ಲಿ ದುಡಿಯುವ ಉದ್ಯೋಗವು ಆ ಜನಾಂಗದ ಇನ್ನಷ್ಟು ಶ್ರೇಯಸ್ಸಿಗೆ ಕಾರಣವಾಗಲಿದೆ.
ಸೋಮವಾರ ಕುಟುಂಬಶ್ರೀ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಉದ್ಯೋಗ ಪತ್ರ ಹಸ್ತಾಂತರ ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಕುಟುಂಬಶ್ರೀ ಜಿಲ್ಲಾ ಸಹಾಯಕ ಸಂಯೋಜಕ ಪ್ರಕಾಶನ್ ಪಾಲಾಯಿ, ಡಿ.ಹರಿದಾಸ್, ವಿ.ಜೋಸೆಫ್, ಕೊರಗ ವಿಭಾಗ ಸಂಯೋಜಕ ಬಿ.ಜಯಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.
ಸ್ತ್ರೀ ಸ್ವಾವಲಂಬನೆ ಸಹಿತ ಮಹಿಳೆಯರ ಸಮಗ್ರ ಅಭಿವೃದ್ದಿಗೆ ಕಾರ್ಯನಿರ್ವಹಿಸುತ್ತಿರುವ ಕುಟುಂಬಶ್ರೀ ಯೋಜನೆಯು ರಾಜ್ಯಾದ್ಯಂತ ಕಳೆದ ಹತ್ತು ವರ್ಷಗಳಿಂದ ಕ್ರಾಂತಿಕಾರಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದೆ. ಈ ಪೈಕಿ ಕಾಸರಗೋಡು ಜಿಲ್ಲಾ ಮಿಷನ್ ಮೀನಾಕ್ಷಿಯವರಿಗೆ ಉದ್ಯೋಗ ಸೌಕರ್ಯ ಮಾಡುವ ಮೂಲಕ ರಾಜ್ಯಮಟ್ಟದಲ್ಲೇ ಗುರುತಿಸಿಕೊಂಡು ಸ್ತುತ್ಯರ್ಹವಾಗಿದೆ.
ಅಭಿಮತ:
ಕುಟುಂಬಶ್ರೀ ಜಿಲ್ಲಾ ಮಿಷನ್ ಮೂಲಕ ಲಭ್ಯವಾಗಿರುವ ಭರವಸೆಯ ಉದ್ಯೋಗ ಖುಷಿ ನೀಡಿದೆ. ಸಮುದಾಯದ ಯುವ ಸಮೂಹದ ಸಮಗ್ರ ಅಭಿವೃದ್ದಿಗೆ ತಾನು ದುಡಿಯಲಿರುವೆ.ಜೊತೆಗೆ ತನ್ನ ವಿದ್ಯಾಭ್ಯಾಸವನ್ನೂ ಮುಂದುವರಿಸಲಿದ್ದು, ಕೊರಗ ಸಮುದಾಯದ ಭಾಷಾ ಸಂಬಂಧಿಯಾಗಿ ಮೂಲ ಸ್ವರೂಪ ಅಧ್ಯಯನ ನಡೆಸಿ ಪಿಎಚ್ ಡಿ ಪದವಿ ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತಳಾಗಿರುವೆ.
ಮೀನಾಕ್ಷಿ ಬೊಡ್ಡೋಡಿ
ಕೊರಗ ಸಮುದಾಯದಲ್ಲಿ ಮೊದಲ ಬಾರಿಗೆ ಎಂ.ಪೀಲ್ ಪಡೆದ ಮಹಿಳೆ.