ಕಾಸರಗೋಡು: ಕೇರಳ ಲೋಕಸೇವಾ ಆಯೋಗ ಕನ್ನಡ ಸಹಾಯಕರ ನೇಮಕಾತಿಗಾಗಿ ಶನಿವಾರ ನಡೆಸಿದ ಪರೀಕ್ಷೆಯಲ್ಲಿ 15ಅಂಕಗಳ ಪ್ರಶ್ನೆ ನಾಪತ್ತೆಯಾಗಿರುವುದು ಪರೀಕ್ಷಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಯಿತು.
ಪ್ರಶ್ನೆ ಪತ್ರಿಕೆಯಲ್ಲಿ 50 ಅಂಕ ನಮೂದಿಸಲಾಗಿದ್ದು, 35ಅಂಕಗಳ ಪ್ರಶ್ನೆ ಮಾತ್ರ ಕೇಳಲಾಗಿತ್ತು. ಬಾಕಿ 15 ಅಂಕಗಳ ಪ್ರಶ್ನೆ ಬಗ್ಗೆ ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿದರು. ಜೀವನ ರೂಪಿಸುವ ಪರೀಕ್ಷೆಯಾಗಿ ಪರಿಗಣಿಸಿ, ಪರೀಕ್ಷಾ ಕೇಂದ್ರಕ್ಕೆ ತಲುಪಿದಾಗ ಎದುರಾದ ಸಮಸ್ಯೆ ಬಗ್ಗೆ ಪರೀಕ್ಷಾರ್ಥಿಗಳೆಲ್ಲರೂ ಏಕಾಏಕಿ ವಿಚಲಿತರಾಗಿದ್ದರು.
ಮಧ್ಯೆ ಪ್ರವೇಶಿಸಿದ ಅಧಿಕಾರಿಗಳು, ಐದು ಅಂಕದ ಪ್ರಶ್ನೆಗೆ 20ಅಂಕ ಎಂದು ತಪ್ಪಾಗಿ ನಮೂದಿಸಿರುವುದು ಗೊಂದಲಕ್ಕೆ ಕಾರಣವಾಗಿರುವುದಾಗಿ ತಿಳಿಸಿದರು. ಒಟ್ಟು 35ಅಂಕಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ಮುದ್ರಣ ದೋಷದಿಂದ 50 ಎಂದು ನಮೂದಾಗಿದೆ. ಈ ಬಗ್ಗೆ ಆತಂಕ ಬೇಡ ಎಂದು ಸ್ವತ: ಪಿಎಸ್‍ಸಿ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಾಗ ಅಭ್ಯರ್ಥಿಗಳು ನಿರಾಳರಾದರು. ಸುಮಾರು 500 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.