ಮೂರು ಟಿಪ್ಪಣಿಗಳು ಇಲ್ಲಿವೆ.
೧. ಗಂಟೆ ಮತ್ತು ಘಂಟೆ - ಯಾವುದು ಸರಿ?
ಉತ್ತರ: ಎರಡೂ ಸರಿ. ಏಕೆಂದರೆ, ಅಥವಾ ಹೇಗೆಂದರೆ...
ಉತ್ತರ: ಎರಡೂ ಸರಿ. ಏಕೆಂದರೆ, ಅಥವಾ ಹೇಗೆಂದರೆ...
‘ಘಂಟಾ’ ಎನ್ನುವುದು ಮೂಲ ಸಂಸ್ಕೃತ ಪದ. ಇದು ಆ ಭಾಷೆಯಲ್ಲಿ ಸ್ತ್ರೀಲಿಂಗ ಪದ. “ಕಂಚಿನಿಂದ ನಿರ್ಮಿತವಾದ ಒಂದು ವಾದ್ಯ. ಅದರ ನಾದವು ಧ್ಯಾನಕ್ಕೆ ಸಹಾಯ ಮಾಡುವ ಶ್ರುತಿಯುಳ್ಳದ್ದು, ಆದರೆ ಪ್ರಮಾಣಬದ್ಧವಾಗಿ ಕಂಚಿನಿಂದಲೇ ಮಾಡಿದ್ದಿರಬೇಕು" - ಇದು ‘ಘಂಟಾ’ ಪದಕ್ಕೆ ನಿಘಂಟುವಿನಲ್ಲಿ ಕೊಟ್ಟಿರುವ ಅರ್ಥ. ಘಂಟಾ ಪದವನ್ನು ಅಂಟಿಸಿಕೊಂಡ ಇನ್ನೂ ಕೆಲವು ಪದಗಳು ಸಂಸ್ಕೃತದಲ್ಲಿವೆ: ಘಂಟಾನಾದ/ ಘಂಟಾರವ/ ಘಂಟಾಶಬ್ದ = ಘಂಟಾ ವಾದ್ಯದ ಶಬ್ದ; ಘಂಟಾತಾಡ = ಘಂಟಾ ವಾದ್ಯವನ್ನು ಬಾರಿಸುವವನು; ಘಂಟಾಗಾರ = ಘಂಟಾ ವಾದ್ಯಗಳನ್ನು ತೂಗಿಸಿಟ್ಟ ಜಾಗ (Belfry); ಘಂಟಾಪಥ = ರಾಜಮಾರ್ಗ, ಕೊರಳಿಗೆ ಘಂಟಾ ವಾದ್ಯವನ್ನು ಕಟ್ಟಿರುವ ಆನೆಗಳು ಸಂಚರಿಸುವ ಮಾರ್ಗ; ಘಂಟಾಪಾಟಲೀ = ಘಂಟಾ ವಾದ್ಯದಂತಿರುವ ಹೂವು; ಘಂಟಾಲೀ = ಘಂಟಾ ವಾದ್ಯಗಳ ಸಾಲು; ಘಂಟಿಕಾ = ಚಿಕ್ಕದಾದ ಘಂಟಾ ವಾದ್ಯ.
ದೇವರಿಗೆ ಪೂಜೆ ಮಾಡುವಾಗ ಘಂಟಾನಾದ ಮಾಡುವ ಮೊದಲು ಹೇಳುವ ಮಂತ್ರ: “ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ| ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ||" ದೇವರ ಆಗಮನಕ್ಕಾಗಿ ಮತ್ತು ರಾಕ್ಷಸರ ನಿರ್ಗಮನಕ್ಕಾಗಿ ಘಂಟಾವಾದನ ಮಾಡುವುದು ಎಂಬ ನಂಬಿಕೆ.
ಸಂಸ್ಕೃತದ ‘ಆ’ಕಾರಾಂತ ಸ್ತ್ರೀಲಿಂಗ ಪದಗಳನ್ನು ಕನ್ನಡದಲ್ಲಿ ‘ಎ’ಕಾರಾಂತ ಪದಗಳಾಗಿ ಬರೆಯುವುದು ವಾಡಿಕೆ. ಸೀತಾ -> ಸೀತೆ; ರಾಧಾ -> ರಾಧೆ; ಗಿರಿಜಾ -> ಗಿರಿಜೆ; ಮಹಿಮಾ -> ಮಹಿಮೆ; ಯಾತ್ರಾ - ಯಾತ್ರೆ ಇತ್ಯಾದಿ. ಇವು ತದ್ಭವ ಪದಗಳಲ್ಲ, ಕನ್ನಡದಲ್ಲಿ ಬಳಕೆಗೆ ಅನುಕೂಲವಾಗುವಂತೆ ಬರೆದ ಸಂಸ್ಕೃತ ಪದಗಳು. ಈ ರೀತಿಯಲ್ಲಿ ‘ಘಂಟಾ’ ಎಂಬ ‘ಆ’ಕಾರಾಂತ ಸ್ತ್ರೀಲಿಂಗ ಪದವು ಕನ್ನಡ ಬರಹದಲ್ಲಿ/ಮಾತಿನಲ್ಲಿ ‘ಎ’ಕಾರಾಂತ ಘಂಟೆ ಆಗುತ್ತದೆ. ‘ಉಪಾಸನೆ’ (ಮೂಲ ಸಂಸ್ಕೃತ ಪದ: ಉಪಾಸನಾ) ಚಿತ್ರದ ಹಾಡಿನ ಸಾಲಿನಲ್ಲಿ “ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು..." ಎಂದು ಬರುತ್ತದೆ. ಇಲ್ಲಿ ಸಂಸ್ಕೃತ ಮೂಲರೂಪದ ‘ಘಂಟಾ’ ಎಂದೇ ಬಳಸುವುದು ಕಷ್ಟ. ಘಂಟೆ ಎಂಬ ರೂಪ ಕನ್ನಡದ್ದೇ ಎನ್ನುವಷ್ಟು perfect fit.
ಸಂಸ್ಕೃತ ಪದಗಳ ತದ್ಭವ ರೂಪಗಳು ಕನ್ನಡ ಪದಗಳಾಗುತ್ತವೆ. ಮಹಾಪ್ರಾಣಾಕ್ಷರಗಳು ಅಲ್ಪಪ್ರಾಣಾಕ್ಷರಗಳಾಗುವುದು ತತ್ಸಮ-ತದ್ಭವ ಮಾರ್ಪಾಡಿನ ಹಲವು ನಿಯಮಗಳ ಪೈಕಿ ಒಂದು. ಈ ರೀತಿಯಲ್ಲಿ ಘಂಟಾ ಪದದ ತದ್ಭವ ರೂಪ ‘ಗಂಟೆ’ ಅಥವಾ ಗಣ್ಟೆ. ಕಿಟ್ಟೆಲ್ ಕೋಶದಲ್ಲಿ ಗಣ್ಟೆ ಎಂದೇ ಬರೆದಿದ್ದಾರೆ. A gong or a bell ಎಂಬ ಅರ್ಥ ಕೊಟ್ಟಿದ್ದಾರೆ. “Also, an English hour" ಎಂಬ ಅರ್ಥವನ್ನೂ ಕೊಟ್ಟಿದ್ದಾರೆ. ಅಂದರೆ, ಕಾಲಮಾಪನದಲ್ಲಿ 60 ನಿಮಿಷಗಳ ಅವಧಿ 1 ಗಂಟೆ. ದಿನಕರ ದೇಸಾಯಿಯವರ ಪದ್ಯ ‘ಗಂಟೆಯ ನೆಂಟನೆ ಓ ಗಡಿಯಾರ ಬೆಳ್ಳಿಯ ಬಣ್ಣದ ಗೋಲಾಕಾರ...’ ಎಂದು ಆರಂಭವಾಗುತ್ತದೆ.
ಕನ್ನಡದಲ್ಲಿ ಬರೆಯುವಾಗ/ಮಾತನಾಡುವಾಗ ಕೆಲವರು Bell ಅಥವಾ gong ಎಂಬ ಅರ್ಥದಲ್ಲಾದರೆ ‘ಘಂಟೆ’ ಅಂತಲೂ, Hour ಅಥವಾ ಗಡಿಯಾರವು ತೋರಿಸುವ 'O clock ಸಮಯ ಹೇಳುವುದಕ್ಕಾದರೆ ‘ಗಂಟೆ’ ಅಂತಲೂ ಬಳಸುವ ಕ್ರಮ ಇಟ್ಟುಕೊಳ್ಳುತ್ತಾರೆ. ಅದು ಅವರವರ ವೈಯಕ್ತಿಕ ಸ್ಟೈಲ್‌ಶೀಟ್. ಹಾಗೆಯೇ ಮಾಡಬೇಕೆಂದು ನಿಯಮಗಳೇನೂ ಇಲ್ಲ. ಕೆಲವರು Bellಗೆ ಗಂಟೆ ಅಂತಲೂ, Hourಗೆ ಘಂಟೆ ಅಂತಲೂ ಬರೆಯಬಹುದು. ಇನ್ನು ಕೆಲವರು ಎರಡಕ್ಕೂ ಗಂಟೆ ಎಂದೇ, ಮತ್ತೆ ಕೆಲವರು ಎರಡಕ್ಕೂ ಘಂಟೆ ಎಂದೇ ಬೇಕಿದ್ದರೂ ಬರೆಯಬಹುದು. ಯಾವುದೂ ತಪ್ಪಲ್ಲ.
“ಚಪಾತಿಗೆ ಹಿಟ್ಟು ಕಲಸಿದ ಮೇಲೆ ಒಂದು ಗಂಟೆ ಇಡಿ" ಎಂದು ಓದಿದ ಗೃಹಿಣಿ ಏನು ಮಾಡಬಹುದು? ಕಲಸಿದ ಹಿಟ್ಟಿನ ಮುದ್ದೆಯ ಮೇಲೆ, ದೇವರಕೋಣೆಯಿಂದ ತಂದ ಗಂಟೆಯನ್ನು ಇಡಬಹುದು!
[‘ಗಂಟೆ ಮತ್ತು ಘಂಟೆ - ಯಾವುದು ಸರಿ?’ ಪ್ರಶ್ನೆ ಕೇಳಿದ ಸಹಪಾಠಿ: ದುಬೈಯಿಂದ ರಾಘವೆಂದ್ರ ಸುಬ್ರಹ್ಮಣ್ಯ.]
====
೨. ಅಪ್ರಾಪ್ತರು ಎಂದರೆ ಯಾರು? ಅವರು ಯಾರಿಗೆ ಪ್ರಾಪ್ತರಾಗಿಲ್ಲ?
೨. ಅಪ್ರಾಪ್ತರು ಎಂದರೆ ಯಾರು? ಅವರು ಯಾರಿಗೆ ಪ್ರಾಪ್ತರಾಗಿಲ್ಲ?
“ಅಪ್ರಾಪ್ತರು ವಾಹನ ಚಾಲನೆ ಮಾಡಿದ್ರೆ ಪಾಲಕರಿಗೆ ಮೂರು ವರ್ಷ ಸೆರೆವಾಸ!" [ವಿಜಯಕರ್ನಾಟಕ. 24ಜುಲೈ2019] ಅಂತ ಒಂದು ತಲೆಬರಹ. ಸುದ್ದಿಯ ವಿವರದಲ್ಲಿ “ಮೋಟಾರು ವಾಹನ ವಿಧೇಯಕದ ತಿದ್ದುಪಡಿಯ ಪ್ರಕಾರ, ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತದೆ. ವಿಶೇಷವಾಗಿ ಅಪ್ರಾಪ್ತರು ವಾಹನ ಚಲಾಯಿಸಿ ಅಪರಾಧ ಎಸಗಿದರೆ ಪಾಲಕರು ಅಥವಾ ವಾಹನ ಮಾಲೀಕರನ್ನೇ ತಪ್ಪಿತಸ್ಥರೆಂದು ಘೋಷಿಸಿ, ಅವರಿಗೆ ರೂ. 25,000 ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ" ಎಂದು ಇದೆ.
ಪ್ರಶ್ನೆ ಮೂಡುವುದೇನೆಂದರೆ ‘ಅಪ್ರಾಪ್ತರು’ ಎಂದರೆ ಯಾರು?
ಪ್ರಾಪ್ತ ಎಂಬ ವಿಶೇಷಣ ಪದಕ್ಕೆ ‘ಹೊಂದಲ್ಪಟ್ಟ’, ‘ಅನುಭವಿಸಲ್ಪಟ್ಟ’, ‘ಸಂಪಾದಿಸಲ್ಪಟ್ಟ’, ‘ಸಂಭವಿಸಿದ’, ‘ಹೊಂದಿದ’, ‘ದೊರಕಿದ’, ‘ಲಭ್ಯವಾದ’, ‘ಬಂದಿರುವ’, ‘ಬಂದು ಸೇರಿದ’, ‘ಒದಗಿದ’ ಮುಂತಾದ ಅರ್ಥಗಳು.
‘ಅಪ್ರಾಪ್ತ’ ಅಂದರೆ ‘ಪ್ರಾಪ್ತ’ದ ವಿರುದ್ಧಪದ. ದೊರಕದ, ಲಭ್ಯವಾಗದ, ಬಾರದ, ಒದಗದ ಮುಂತಾಗಿ ಅದರ ಅರ್ಥ. ಅದು ಕೂಡ ವಿಶೇಷಣಪದವೇ.
‘ಅಪ್ರಾಪ್ತ’ ಅಂದರೆ ‘ಪ್ರಾಪ್ತ’ದ ವಿರುದ್ಧಪದ. ದೊರಕದ, ಲಭ್ಯವಾಗದ, ಬಾರದ, ಒದಗದ ಮುಂತಾಗಿ ಅದರ ಅರ್ಥ. ಅದು ಕೂಡ ವಿಶೇಷಣಪದವೇ.
ಹೀಗಿರಲು, ‘ಅಪ್ರಾಪ್ತರು’ ಎಂದರೆ ಯಾರು? ಅವರು ಯಾರಿಗೆ ದೊರಕಿಲ್ಲ? ಯಾರಿಗೆ ಸಿಕ್ಕಿಲ್ಲ? ಯಾರಿಗೆ ಒದಗಿ ಬಂದಿಲ್ಲ? ಅವರು unclaimed ಅಥವಾ ‘ಬೇವಾರಿಸ್’ ಆಗಿರುವವರೇ?
ಈ ಸಂದರ್ಭದಲ್ಲಿ ‘ಅಪ್ರಾಪ್ತರು’ ಎಂಬ ಬಳಕೆಯೇ ತಪ್ಪು. ‘ಅಪ್ರಾಪ್ತ ವಯಸ್ಸಿನವರು’ ಎಂದು ಬರೆಯಬೇಕು. ಅವರಿಗೆ ನಿರ್ದಿಷ್ಟವಾದ ವಯಸ್ಸು ಆಗಿಲ್ಲ ಎಂಬ ಅರ್ಥ ಸರಿಯಾಗುತ್ತದೆ. ವಯಸ್ಸು ಎಂಬ ನಾಮಪದವಿಲ್ಲದೆ ಅಪ್ರಾಪ್ತ ಎಂಬ ವಿಶೇಷಣ ಪದವನ್ನು ಮಾತ್ರ dangling ರೀತಿಯಲ್ಲಿ ಬಿಟ್ಟರೆ ವಾಕ್ಯ ಸರಿಯಾಗುವುದಿಲ್ಲ.
‘ಅಪ್ರಾಪ್ತ ವಯಸ್ಸಿನವರು’ ಎಂದು ಬರೆಯಲಿಕ್ಕೆ ಹೆಚ್ಚು ಅಕ್ಷರಗಳು ಬೇಕಾಗುತ್ತವೆ, ಹೇಗಾದರೂ ಮಾಡಿ ಕಡಿಮೆಗೊಳಿಸಬೇಕು ಅಂತಾದರೆ ‘ಅಪ್ರಾಯಸ್ಥರು’ ಎಂದು ಬರೆಯಬಹುದು. ‘ಅಪ್ರಾಪ್ತರು’ ಎಂದು ತಪ್ಪಾಗಿ ಪದಬಳಕೆ ಮಾಡುವುದಕ್ಕಿಂತ ಅದು ಎಷ್ಟೋ ವಾಸಿ. ಅಪ್ರಾಪ್ತ ಬಾಲಕಿ, ಅಪ್ರಾಪ್ತ ಹುಡುಗ ಎಂದು ಮುಂತಾಗಿಯೂ ಪತ್ರಿಕೆಗಳು ತಪ್ಪಾಗಿ ಬಳಸುತ್ತವೆ. ಅಪ್ರಾಪ್ತ ಬಾಲಕಿ ಅಂದರೆ ಹುಡುಗಿ ಎಲ್ಲಿಯೋ ಕಳೆದುಹೋಗಿದ್ದಾಳೆ ಸಿಕ್ಕಿಲ್ಲ ಎಂಬ ಅರ್ಥ ಬರುತ್ತದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಎಂದರೆ ಮಾತ್ರ ‘ನಿರ್ದಿಷ್ಟ ವಯಸ್ಸು ಆಗದ ಹುಡುಗಿ’ ಎಂಬ ಅರ್ಥ ಬರುವುದು.
ಪತ್ರಿಕೆಗಳು ಇದನ್ನು ಸರಿಪಡಿಸಿಕೊಂಡರೆ ಒಳ್ಳೆಯದು. ಇಲ್ಲವಾದರೂ, ಶಿಷ್ಟ ಬರವಣಿಗೆಯಲ್ಲಿ ನಾವು ‘ಅಪ್ರಾಪ್ತ ವಯಸ್ಸಿನ ಬಾಲಕ/ಕಿ’ ಎಂದು ಬರೆಯಬೇಕಾದಲ್ಲಿ ಅಪ್ರಾಪ್ತ ಬಾಲಕ/ಕಿ ಎಂದು ಬರೆಯದಿರುವುದು ಒಳ್ಳೆಯದು.
====
೩. ಪದೇ ಪದೇ ಬಾಲ ಬೆಳೆಸಿಕೊಳ್ಳುವ ಕನ್ನಡೇತರ ಪದಗಳು
೩. ಪದೇ ಪದೇ ಬಾಲ ಬೆಳೆಸಿಕೊಳ್ಳುವ ಕನ್ನಡೇತರ ಪದಗಳು
ಅ) ಸಾಬೀತು ಸರಿ. ರುಜುವಾತು ಮಾಡಿದುದು, ಭದ್ರತೆಯುಳ್ಳದ್ದು ಎಂಬ ಅರ್ಥದ ಪದ. ಅರೇಬಿಕ್ ಮೂಲದ ‘ಸಬೂತ್’ನಿಂದ ಬಂದದ್ದು. ಅದನ್ನು ಬರೆಯುವಾಗ ‘ಸಾಭೀತು’ ಎಂದು ಮಹಾಪ್ರಾಣ ಅಕ್ಷರ ಬಳಸಬೇಕಿಲ್ಲ.
ಆ) ಲಾಬಿ ಅಥವಾ ಲಾಬ್ಬಿ ಎಂದು ಬರೆಯಬಹುದು ಇಂಗ್ಲಿಷ್‌ನ lobbyಯನ್ನು. seek to influence (a politician or public official) on an issue ಎಂಬ ಅರ್ಥ. ಅದನ್ನು ‘ಲಾಭಿ’ ಎಂದು ಮಹಾಪ್ರಾಣ ಅಕ್ಷರ ಬಳಸಿ ಬರೆಯಬೇಕಿಲ್ಲ.
ಇ) ಮೇದಿನಿ ಸರಿ. ಭೂಮಿ ಎಂಬ ಅರ್ಥ. ಸಂಸ್ಕೃತದ ಪದ. ಅಯಿಗಿರಿ ನಂದಿನಿ ನಂದಿತ ‘ಮೇಧಿನಿ’ ಎಂದು ಬರೆದರೆ ತಪ್ಪಾಗುತ್ತದೆ.
ಈ) ಕುರ್ಚಿ ಸರಿ. ಹಿಂದೀ ಭಾಷೆಯ ಕುರ್ಸೀಯಿಂದ ಬಂದದ್ದು. ಅದನ್ನು ಖುರ್ಚಿ ಎಂದು ಮಹಾಪ್ರಾಣಾಕ್ಷರ ಬಳಸಿ ಬರೆಯಬಾರದು.
ಉ) ಸುಬೇದಾರ್ ಸರಿ. ಪರ್ಶಿಯನ್-> ಉರ್ದು-> ಹಿಂದೀ ಮಾರ್ಗವಾಗಿ ಬಂದ ಪದ. ಒಂದು ಸುಬಹ್(ಮೊಘಲ್ ಆಡಳಿತದಲ್ಲಿ ಒಂದು ಪ್ರಾಂತ್ಯ)ಗೆ ಅಧಿಕಾರಿಯಾಗಿದ್ದವನು ಸುಬೇದಾರ್. ಅವನಿಗೆ ಬಾಲ ಇಲ್ಲ. ಹಾಗಾಗಿ ಅವನನ್ನು ಸುಭೇದಾರ್ ಎನ್ನಬೇಕಿಲ್ಲ. ಬೆಂಗಳೂರಿನಲ್ಲಿರುವುದು ಸುಭೇದಾರ್ ಛತ್ರಂ ರೋಡ್ ಅಲ್ಲ, ‘ಸುಬೇದಾರ್ ಛತ್ರಂ’ ರಸ್ತೆ.
ಆ) ಲಾಬಿ ಅಥವಾ ಲಾಬ್ಬಿ ಎಂದು ಬರೆಯಬಹುದು ಇಂಗ್ಲಿಷ್‌ನ lobbyಯನ್ನು. seek to influence (a politician or public official) on an issue ಎಂಬ ಅರ್ಥ. ಅದನ್ನು ‘ಲಾಭಿ’ ಎಂದು ಮಹಾಪ್ರಾಣ ಅಕ್ಷರ ಬಳಸಿ ಬರೆಯಬೇಕಿಲ್ಲ.
ಇ) ಮೇದಿನಿ ಸರಿ. ಭೂಮಿ ಎಂಬ ಅರ್ಥ. ಸಂಸ್ಕೃತದ ಪದ. ಅಯಿಗಿರಿ ನಂದಿನಿ ನಂದಿತ ‘ಮೇಧಿನಿ’ ಎಂದು ಬರೆದರೆ ತಪ್ಪಾಗುತ್ತದೆ.
ಈ) ಕುರ್ಚಿ ಸರಿ. ಹಿಂದೀ ಭಾಷೆಯ ಕುರ್ಸೀಯಿಂದ ಬಂದದ್ದು. ಅದನ್ನು ಖುರ್ಚಿ ಎಂದು ಮಹಾಪ್ರಾಣಾಕ್ಷರ ಬಳಸಿ ಬರೆಯಬಾರದು.
ಉ) ಸುಬೇದಾರ್ ಸರಿ. ಪರ್ಶಿಯನ್-> ಉರ್ದು-> ಹಿಂದೀ ಮಾರ್ಗವಾಗಿ ಬಂದ ಪದ. ಒಂದು ಸುಬಹ್(ಮೊಘಲ್ ಆಡಳಿತದಲ್ಲಿ ಒಂದು ಪ್ರಾಂತ್ಯ)ಗೆ ಅಧಿಕಾರಿಯಾಗಿದ್ದವನು ಸುಬೇದಾರ್. ಅವನಿಗೆ ಬಾಲ ಇಲ್ಲ. ಹಾಗಾಗಿ ಅವನನ್ನು ಸುಭೇದಾರ್ ಎನ್ನಬೇಕಿಲ್ಲ. ಬೆಂಗಳೂರಿನಲ್ಲಿರುವುದು ಸುಭೇದಾರ್ ಛತ್ರಂ ರೋಡ್ ಅಲ್ಲ, ‘ಸುಬೇದಾರ್ ಛತ್ರಂ’ ರಸ್ತೆ.
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.