ಮಂಜೇಶ್ವರ: ಇತಿಹಾಸದ ಪ್ರಸಿದ್ದ,18 ಪೇಟೆಗಳ ದೇವಾಲಯ ಎಂದೇ ಖ್ಯಾತಿಯ ಮಂಜೇಶ್ವರ ಶ್ರೀಅನಂತೇಶ್ವರ ದೇವಾಲಯದಲ್ಲಿ ಸೋಮವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ನಾಗರ ಪಂಚಮಿ ಉತ್ಸವ ನಡೆಯಿತು.
ಸೋಮವಾರ ಮುಂಜಾನೆ 4.30ರ ಸುಮಾರಿಗೆ ಭಕ್ತರ ದಂಡು ವಿವಿಧೆಡೆಗಳಿಂದ ಶ್ರೀಕ್ಷೇತ್ರಕ್ಕೆ ಆಗಮಿಸತೊಡಗಿತ್ತು. ದೇವಾಲಯದ ಮುಂಭಾಗದ ಬೃಹತ್ ನಾಗ ದೇವರ ಕಟ್ಟೆಯಲ್ಲಿ ಕ್ಷೀರಾಭಿಷೇಕ, ಎಳನೀರು ಅಭಿಷೇಕಗಳು ನೆರವೇರಿತು. ಜೊತೆಗೆ ವಿಶೇಷ ವಾಸುಕೀ ಪೂಜೆಯೂ ಈ ಸಂದರ್ಭ ದೇವಾಲಯದಲ್ಲಿ ನೆರವೇರಿತು.
ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು, ಕುಂದಾಪುರ, ಉಡುಪಿ ಜಿಲ್ಲೆಗಳ ಸಹಿತ ವಿವಿಧೆಡೆಗಳಿಂದ ಎರಡು ಸಾವಿರಕ್ಕಿಂತಲೂ ಮಿಕ್ಕಿದ ಭಕ್ತರು ಪಾಲ್ಗೊಂಡು ಅಭಿಷೇಕ ಸೇವಾ ವಿಧಿಗಳನ್ನು ಪೂರೈಸಿ ಪುನೀತರಾದರು.
ಪುರೋಹಿತರಾದ ಸುಖಾನಂದ ಭಟ್, ದಿನೇಶ್ ಭಟ್, ರಾಮದಾಸ ಭಟ್, ಸತೀಶ್ ಭಟ್,ಬಾಲಕೃಷ್ಣ ಭಟ್, ನರಸಿಂಹ ಭಟ್,ಬದ್ರಿನಾಥ ಭಟ್, ಪರಿಚಾರಕ ಗಿರಿಧರ ಭಟ್, ಆಡಳಿತ ಸಮಿತಿಯ ಉಪಾಧ್ಯಕ್ಷ ಚಕ್ರಪತಿ ಪ್ರಭು, ಟ್ರಸ್ಟಿ ಕೃಷ್ಣ ಭಟ್, ಯೋಗೀಶ್ ಕಾಮತ್ ಮೊದಲಾದವರು ನೇತೃತ್ವ ವಹಿಸಿದ್ದರು.