ನವದೆಹಲಿ: ಲೋಕಸಭೆಯಲ್ಲಿ ಇದೇ ಮೊದಲ ಬಾರಿಗೆ ಗೆದ್ದಿರುವ ಅಮಿತ್ ಶಾ, ರವಿಶಂಕರ್ ಪ್ರಸಾದ್ ಹಾಗೂ ಸ್ಮೃತಿ ಇರಾನಿ ಅವರಿಗೆ ಯುಪಿಎ ಅಧಿನಾಯಕಿ ಸೋನಿಯಾಗಾಂಧಿ ಜೊತೆಗೆ ಮೊದಲ ಸಾಲಿನಲ್ಲಿ ಕುಳಿತಿರಲು ಆಸನದ ವ್ಯವಸ್ಥೆ ಮಾಡಲಾಗಿದೆ. ಆದರೆ, ಮೂರನೇ ಬಾರಿಗೆ ಗೆಲುವು ಸಾಧಿಸಿರುವ ರಾಹುಲ್ ಗಾಂಧಿಗೆ ಎರಡನೇ ಸಾಲಿನಲ್ಲಿ ಹಳೆಯ ಸೀಟನ್ನು ನೀಡಲಾಗಿದೆ.
ಸ್ಪೀಕರ್ ಓಂ ಬಿರ್ಲಾ ನಿನ್ನೆ ಆಸನಗಳನ್ನು ಹಂಚಿಕೆ ಮಾಡಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸದಾನಂದಗೌಡ, ನರೇಂದ್ರ ಸಿಂಗ್ ತೋಮರ್, ಅರ್ಜುನ್ ಮುಂಡಾ ಮತ್ತು ಅರವಿಂದ್ ಸಾವಂತ್ ಅವರಿಗೂ ಮೊದಲ ಸಾಲಿನಲ್ಲಿ ಆಸನದ ಹಂಚಿಕೆ ಮಾಡಲಾಗಿದೆ.
ಪ್ರತಿಪಕ್ಷಗಳ ಸಾಲಿನಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌದರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹಾಗೂ ಡಿಎಂಕೆ ಮುಖಂಡ ಟಿಆರ್ ಬಾಲು ಅವರಿಗೆ ಮೊದಲ ಸಾಲಿನಲ್ಲಿ ಆಸನ ನೀಡಲಾಗಿದೆ.
ಈ ಹಿಂದೆ ರಾಜ್ಯಸಭೆ ಸದಸ್ಯೆಯಾಗಿ ಈ ಬಾರಿ ಲೋಕಸಭೆಗೆ ಮೊದಲ ಬಾರಿಗೆ ಪ್ರವೇಶಿಸಿರುವ ಸ್ಮೃತಿ ಇರಾನಿಗೆ ಮೊದಲ ಸಾಲಿನಲ್ಲಿ ಆಸನ ನೀಡಲಾಗಿದೆ. ಶಾ ಹಾಗೂ ರವಿಶಂಕರ್ ಪ್ರಸಾದ್ ಅವರಿಗೆ ಈ ಹಿಂದೆ ಮೇಲ್ಮನೆಯಲ್ಲೂ ಮೊದಲ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು.