ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆ ವಾತಾವರಣದ ಹಿನ್ನಲೆಯಲ್ಲಿ ಸರ್ಕಾರ 24 ಗಂಟೆಗಳಲ್ಲಿ ಕಾಶ್ಮೀರ ತೊರೆಯುವಂತೆ ಪ್ರವಾಸಿಗರಿಗೆ ಸೂಚನೆ ನಿನ್ನೆ ನೀಡಿದೆ ಎಂದು ತಿಳಿದುಬಂದಿದೆ.
ಕಾಶ್ಮೀರದಲ್ಲಿ ಸೇನೆ ಮತ್ತು ಉಗ್ರರ ನಡುವಿನ ಪ್ರಕ್ಷುಬ್ಧತೆ ತೀವ್ರಗೊಂಡಿದ್ದು, ಈಗ ಕಾಶ್ಮೀರ ಅಕ್ಷರಶಃ ಬೂದಿ ಮುಚ್ಚಿದ ಕೆಂಡವಾಗಿದೆ. ಹೀಗಾಗಿ 24 ಗಂಟೆಗಳಲ್ಲಿ ಕಾಶ್ಮೀರ ತೊರೆಯುವಂತೆ ಅಲ್ಲಿನ ಸ್ಥಳೀಯ ಆಡಳಿತ ಪ್ರವಾಸಿಗರಿಗೆ ಸೂಚನೆ ನೀಡಿದೆ. ಇನ್ನು ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿರುವ ಕಾಶ್ಮೀರ ಪೊಲೀಸರು ಅಲ್ಲಿನ ಪ್ರತೀಯೊಂದು ಹೊಟೆಲ್, ಲಾಡ್ಜ್, ರೆಸ್ಟೋರೆಂಟ್, ಪ್ರವಾಸಿಕೇಂದ್ರಗಳಿಗೆ ತೆರಳಿ ಅಲ್ಲಿರುವ ಪ್ರವಾಸಿಗರು ಕೂಡವೇ ಕಾಶ್ಮೀರ ತೊರೆಯುವಂತೆ ಸೂಚನೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಉಗ್ರರು ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಕಾಶ್ಮೀರ ಕಣಿವೆಯಲ್ಲಿ ಸದ್ಯದ ಭದ್ರತಾ ಪರಿಸ್ಥಿತಿ ಮತ್ತು ಯಾತ್ರಿಗಳ ಸುರಕ್ಷತೆ, ಭದ್ರತಾ ದೃಷ್ಟಿಯಿಂದ ಆದಷ್ಟು ಬೇಗ ಕಣಿವೆ ರಾಜ್ಯ ತೊರೆಯಿರಿ ಎಂದು ಜಮ್ಮು ಮತ್ತು ಕಾಶ್ಮೀರ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಈ ಹಿಂದೆ ಭದ್ರತಾ ಪ್ರಕಟಣೆ ನೀಡಿದ್ದರು. ಇದೇ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ,ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭಾನುವಾರ ಮಹತ್ವದ ಸಭೆ ಕೂಡ ನಡೆಸಿದ್ದರು.
ಇದರ ಬೆನ್ನಲ್ಲೇ ಕಾಶ್ಮೀರ ಸರ್ಕಾರ ಪ್ರವಾಸಿಗರು ಕೂಡಲೇ ಕಣಿವೆ ರಾಜ್ಯ ತೊರೆಯುವಂತೆ ಸೂಚಿಸಿದೆ.
ಕಾಶ್ಮೀರದಲ್ಲಿ ಉಗ್ರ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿಯನ್ನು ರವಾನಿಸಲು ನಿರ್ಧರಿಸಿದೆ. ಕಳೆದ ವಾರವಷ್ಟೇ 38 ಸಾವಿರ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ಕಣಿವೆ ರಾಜ್ಯಕ್ಕೆ ನಿಯೋಜಿಸಲಾಗಿತ್ತು.