ಕಾಸರಗೋಡು: ವಿದ್ಯಾನಗರದಲ್ಲಿರುವ ಚಿನ್ಮಯ ವಿದ್ಯಾಲಯದಲ್ಲಿ ಪೂಜ್ಯ ಗುರುದೇವ ಸ್ವಾಮಿ ಚಿನ್ಮಯಾನಂದರ 26 ನೇ ಮಹಾಸಮಾಧಿ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಜೀಯವರು ಚಿನ್ಮಯಾನಂದರ ಒಂದು ಹೇಳಿಕೆಯನ್ನು ಉದ್ಧರಿಸಿ ಯುವಜನತೆ ಕೋಪ ತಾಪಗಳಿಗೆ ಬಲಿಯಾಗದೆ ಪರಸ್ಪರ ಪ್ರೀತಿಯಿಂದ ವ್ಯವಹರಿಸಬೇಕು. ನಮ್ಮ ಮಾತು ಆತ್ಮೀಯವೂ, ಆಕರ್ಷಕವೂ ಆಗಿರಬೇಕು. ಇತರರ ದು:ಖವನ್ನು ನೀಗಿಸುವಂತಿರಬೇಕು ಎಂದರು.
ಪ್ರಾತ:ಕಾಲದಿಂದ ಆರಂಭಗೊಂಡ ಗುರುಸ್ತೋತ್ರ, ಭಜನೆ, ಭಗವದ್ಗೀತೆ ಪಾರಾಯಣದೊಂದಿಗೆ ಮುಂದುವರಿಯಿತು. ತನ್ನ ಭಗವದ್ಗೀತಾ ಯಜ್ಞದಿಂದ ಪ್ರಪಂಚವನ್ನೇ ಪಾವನಗೊಳಿಸಿದ ಸ್ವಾಮಿ ಚಿನ್ಮಯಾನಂದರ ವೀಡಿಯೋವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಅಷ್ಟೋತ್ತರ ಅರ್ಚನೆಯ ಬಳಿಕ ಪ್ರಸಾದ ವಿವರಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ವಿದ್ಯಾಲಯದ ಪ್ರಾಂಶುಪಾಲರಾದ ಬಿ.ಪುಷ್ಪರಾಜ್, ಉಪಪ್ರಾಂಶುಪಾಲೆ ಸಂಗೀತಾ ಪ್ರಭಾಕರನ್, ಮುಖ್ಯೋಪಾಧ್ಯಾಯಿನಿ ಸಿಂಧು ಶಶೀಂದ್ರನ್, ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.