ಕೃತಿ:ಚಂದ್ರಗಿರಿಯ ತೀರದಲ್ಲಿ
ಕೃತಿ ಕರ್ತೃ:ಸಾರಾ ಅಬೂಬಕರ್
ಬರಹ:ಚೇತನಾ ಕುಂಬಳೆ
ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು ಕಾಸರಗೋಡಿನವರೆಂಬುದೇ ನಮ್ಮ ಹೆಮ್ಮೆ . ಕಾಸರಗೋಡಿನ ಬಿ.ಬಿ.ಎಮ್ ಹೈಸ್ಕೂಲ್ ನಲ್ಲಿ ಕಲಿತದ್ದರಿಂದ ಕಾಸರಗೋಡಿನ ಆ ಶಾಲೆಯನ್ನು ನೋಡಿದಾಗಲೆಲ್ಲ ಸಾರಾ ಅವರ ನೆನಪುಗಳು ಓಡಿ ಬರುತ್ತವೆ. ಕನ್ನಡದ ಪ್ರಮುಖ ಸಾಹಿತಿಯಾಗಿ ಗುರುತಿಸಿಕೊಂಡಿರುವ ಇವರು ಕತೆ, ಕಾದಂಬರಿ, ಲೇಖನ, ಅನುವಾದ, ಪ್ರವಾಸ ಕಥನ ಮೊದಲಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದವರು. ಹಲವು ಪ್ರಶಸ್ತಿ ಗೌರವಗಳನ್ನು ಪಡೆದುಕೊಂಡವರು.
ಸಾರಾ ಅವರ ಪ್ರಥಮ ಕಾದಂಬರಿಯೇ 'ಚಂದ್ರಗಿರಿ ತೀರದಲ್ಲಿ'. "ನಿಮ್ಮ ಜನಾಂಗದ ವಿಷಯ ಒಂದು ಸಣ್ಣ ಕತೆ ಅಥವಾ ಚಿಕ್ಕ ಅಧ್ಯಾಯಗಳ ಒಂದು ಪುಟ್ಟ ಕಾದಂಬರಿ ಬರೆದರೆ ನಮಗೆ ಅನುಕೂಲವಾಗುತ್ತದೆ".ಎಂಬ ಪಿ. ಲಂಕೇಶರ ಪ್ರೋತ್ಸಾಹದ ನುಡಿಗಳೇ ಈ ಕಾದಂಬರಿಯ ಸೃಷ್ಟಿಗೆ ಪ್ರಮುಖ ಕಾರಣವಾಯಿತು. ತಮ್ಮ ಊರಲ್ಲಿ ನಡೆದ ನೈಜ ಘಟನೆಯೊಂದರ ಆಧಾರದಲ್ಲೇ ಸಾರಾ ಅವರು ಈ ಕಾದಂಬರಿಯನ್ನು ಬರೆದಿರುವರು. ಈ ಕಾದಂಬರಿ ಲಂಕೇಶ ಪತ್ರಿಕೆಯಲ್ಲಿ ದಾರವಾಹಿಯಾಗಿಯೂ ಬಂದಿತ್ತು. ಇದು ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿಯನ್ನು ಪಡೆದುದಲ್ಲದೆ, ತಮಿಳು ಭಾಷೆಯಲ್ಲಿ ಚಲನಚಿತ್ರವಾಗಿ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮಲಯಾಳ, ತಮಿಳು, ತೆಲುಗು, ಒರಿಯಾ, ಣರಾಠಿ, ಇಂಗ್ಲೀಷ್ ಮುಂತಾದ ಭಾಷೆಗಳಿಗೂ ಅನುವಾದಗೊಂಡಿದೆ.
ಲಂಕೇಶರ ಸಲಹೆಯಂತೆಯೇ ಈ ಕಾದಂಬರಿಯಲ್ಲಿ ಮುಸ್ಲಿಂ ಸಮಾಜಕ್ಕೆ ಸಂಬಂಧಿಸಿದ, ಅವರ ಜೀವನ ಕ್ರಮ ಸಂಸ್ಕೃತಿ ಆಚಾರ ವಿಚಾರಗಳನ್ನೊಳಗೊಂಡ ಒಂದು ಪುಟ್ಟ ಕಾದಂಬರಿ ಇದು. ಚಂದ್ರಗಿರಿಯ ಪೂರ್ವ ಭಾಗದ ಕಿಳಿಯೂರು ಗ್ರಾಮದಲ್ಲಿರುವ ಮಹಮ್ಮದ್ ಖಾನರಿಗೆ ಒಂದು ಎಕರೆ ತೆಂಗಿನ ತೋಟ, ಮಣ್ಣಿನ ಸಣ್ಣ ಮನೆಯೇ ಆಸ್ತಿ. ದನ ಮತ್ತು ಆಡಿನ ಹಾಲು ಮತ್ತೆ ಕೋಳಿಯ ಮೊಟ್ಟೆಯನ್ನು ಮಾರಿ, ಜೊತೆಗೆ ತೆಂಗಿನ ಮಡಲುಗಳನ್ನು ಮಾರಿ ಬಂದ ಆದಾಯದಿಂದ ಸಂಸಾರವನ್ನು ನಡೆಸುತ್ತಿದ್ದರು. ಖಾನರು ಕೋಟು ತೊಟ್ಟು ಕೊಂಡಲ್ಲದೆ ಮನೆಯಿಂದ ಹೊರಗೆ ಕಾಲಿಡುತ್ತಿರಲಿಲ್ಲ. ಬಡತನವನ್ನು ಮುಚ್ಚಲು ಕೋಟಿನಷ್ಟು ಒಳ್ಳೆಯ ವಸ್ತು ಇನ್ನೊಂದಿಲ್ಲ ಎಂಬುದು ಖಾನರ ಅಭಿಮತ. ಅವರ ಸ್ವಭಾವವಂತೂ ತೀರಾ ಒರಟು. ಮುಂಗೋಪಿ, ತನ್ನ ಮಾತೇ ನಡೆಯಬೇಕೆಂಬ ಹಠ, ಒಂದು ರೀತಿಯ ಸರ್ವಾಧಿಕಾರ ಮನೋಭಾವ. ಖಾನರು ಎಲ್ಲ ಜವಾಬ್ದಾರಿಯನ್ನು ಹೆಂಡತಿಯ ಹೆಗಲೇರಿಸಿ ಯಾವುದೇ ಚಿಂತೆ ಯಿಲ್ಲದೆ ಹಾಯಾಗಿದ್ದು ಬಿಡುತ್ತಿದ್ದರು. ಬಾಲ್ಯದ ಮುಗ್ಧತೆ ಮರೆಯಾಗದ 11ರ ಪ್ರಾಯದಲ್ಲೇ ಫಾತಿಮಾಳಿಗೆ ಖಾನರೊಡನೆ ವಿವಾಹವಾಗುತ್ತದೆ. ಹೆಣ್ಣು ದೊಡ್ಡವಳಾಗುವವರೆಗೂ ಕಾಯದೆ ಬಾಲ್ಯ ವಿವಾಹ ನಡೆಸುವ ಪದ್ಧತಿ ಆಗಿನ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿರುವುದನ್ನು ಗಮನಿಸಬಹುದು. ಅದೂ ಅಲ್ಲದೆ ಇಲ್ಲಿ ಹೆಣ್ಣಿನ ಒಪ್ಪಿಗೆ ಯಾರಿಗೂ ಪ್ರಧಾನವಾಗುವುದಿಲ್ಲ. ಹಿರಿಯರಿಗೆ ಇಷ್ಟವಾದರೆ ಮುಗಿಯಿತು. ಅದಲ್ಲದೆ ಹೆಣ್ಣಿನೊಡನೆ ಆಕೆಯ ಮನೆತನ, ಅವಳೊಡನೆ ಬರುವ ಹಣ, ಆಸ್ತಿಯೂ ಮುಖ್ಯ. ಇವುಗಳ ಮುಂದೆ ಆಕೆಯ ಪ್ರಾಯ ಗೌಣವಾಗುತ್ತದೆ. "ಮದುವೆಯಾಗಲು ಚಿಕ್ಕ ಹುಡುಗಿಯೇ ಚೆನ್ನ. ಗಂಡ ಮುದುಕನಾಗಿ ಹಾಸಿಗೆ ಹಿಡಿದಾಗ ಹೆಂಡತಿ ಇನ್ನೂ ಗಟ್ಟಿ ಮುಟ್ಟಾಗಿ ಆತನ ಚಾಕರಿ ಮಾಡಲು ಶಕ್ತಳಾಗಿರುತ್ತಾಳೆ" ಎಂಬುದು ಹಿರಿಯರ ಮನೋಭಾವ. ಹೆಣ್ಣು ಯಾವಾಗಲೂ ಗಂಡಿನ ಸೇವೆಗಾಗಿಯೇ ಹುಟ್ಟಿದವಳು,ಅವನನ್ನು ತೃಪ್ತಿ ಪಡಿಸುವುದೇ ಆಕೆಯ ಧರ್ಮ ಎನ್ನುವಲ್ಲಿ ಹೆಣ್ಣೂ ಒಂದು ಜೀವ , ಆಕೆಗೂ ಒಂದು ಮನಸ್ಸಿದೆ. ಅಲ್ಲಿ ಭಾವನೆಗಳಿವೆ, ಕನಸುಗಳಿವೆ ಎಂಬುದನ್ನು ಮರೆಯುತ್ತಾರೆ. ಅವರಿಗೆ ಗಂಡಿನ ಸುಖ ಸಂತೋಷ ಮಾತ್ರ ಪ್ರಧಾನವಾಗುತ್ತದೆ. ಮದುವೆಯ ಬಗೆಗಿನ ಸ್ಪಷ್ಟ ಕಲ್ಪನೆಯೂ ಇಲ್ಲದಾಗ ಆಕೆಯ ಮೇಲೆರಗಿ ದೇಹದ ತೃಷೆಯನ್ನು ತಣಿಸಿಕೊಳ್ಳಲು ಆತುರ ಪಡುವ ಗಂಡು ಹೆಣ್ಣಿನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಅಸಮರ್ಥನಾಗುತ್ತಾನೆ. ಆಕೆಯೊಡನೆ ಮೃದು ಸಾಮೀಪ್ಯ ತೋರಿ ಪ್ರೀತಿಯಿಂದ ಮಾತಾಡಿಸಿ ಆಕೆಯ ಮನ ಗೆಲ್ಲುವ ಪ್ರಯತ್ನವನ್ನೂ ಮಾಡದೆ ಗಂಡನ ಅಧಿಕಾರ ಚಲಾಯಿಸುವ ಗಂಡಿನ ದರ್ಪವನ್ನಿಲ್ಲಿ ಕಾಣಬಹುದು. ಹೀಗೆ ಫಾತಿಮಾ ದಾಂಪತ್ಯದಲ್ಲಿ ಒರಟು ಕಲ್ಲು ಮುಳ್ಳುಗಳ ಮೇಲೆ ಪ್ರಥಮ ಹೆಜ್ಜೆಯಿರಿಸಿ ಕಹಿ ಅನುಭವಗಳನ್ನೇ ಪಡೆದುಕೊಂಡು ತನ್ನೆಲ್ಲ ನೋವು ಸಂಕಟಗಳನ್ನು ಸಹಿಸಿಕೊಂಡವಳು. ಅದರ ಮಧ್ಯೆಯೂ ಗಂಡ ತನಗೆ ಸವತಿಯನ್ನು ತರದ್ದಕ್ಕೆ ಗಂಡು ಮಗು ಬೇಕೆಂದು ಪೀಡಿಸದ್ದಕ್ಕೆ ಗಂಡನಲ್ಲಿ ಕೃತ???ತಾ ಭಾವ ಹೊಂದಿದವಳು.
ಖಾನರ ಹಿರಿಯ ಮಗಳು ನಾದಿರಾಳೂ ತನ್ನ 14 ವಯಸ್ಸಿನಲ್ಲಿ ವ್ಯಾಪಾರಿಯಾಗಿದ್ದ ರಶೀದ್ ನನ್ನು ವಿವಾಹವಾಗಿ ಸುಖವಾಗಿ ಸಂಸಾರ ನಡೆಸುತ್ತಿದ್ದಾಳೆ. ಇಲ್ಲಿ ವಿವಾಹ ಸಮಯದಲ್ಲಿ ಹಿರಿಯರಿಗೆ ಒಪ್ಪಿಗೆಯಾದರೆ ಸಾಕು ಗಂಡು ಹೆಣ್ಣು ಪರಸ್ಪರ ನೋಡಿಕೊಳ್ಳುವ ಪದ್ಧತಿಯಿಲ್ಲ.ಅವರು ಮದುವೆ ಮಂಟಪದಲ್ಲೇ ಮೊದಲ ಬಾರಿಗೆ ನೋಡಿಕೊಳ್ಳುವ ಅವಕಾಶ. ಹೆತ್ತವರದ್ದೇ ಅಂತಿಮ ತೀರ್ಮಾನವಾಗಿರುವಾಗ ಹೆಣ್ಣಿನ ಒಪ್ಪಿಗೆ ಯಾರಿಗೂ ಅಗತ್ಯವಿಲ್ಲ. ರಶೀದ್ ಕಲಿತ ಹುಡುಗನಾದ್ದರಿಂದ ಹೆಣ್ಣಿನೊಡನೆ ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ????ನ ಹೊಂದಿದ್ದನು. ತಾಯಿ ಅನುಭವಿಸಿದ ಕಷ್ಟ ಮಗಳಿಗೆ ಬಂದಿರಲಿಲ್ಲ. ಪ್ರೀತಿಸುವ ಗಂಡ, ಮಗು, ಅರ್ಥ ಮಾಡಿಕೊಳ್ಳುವ ಅತ್ತೆಯೊಂದಿಗೆ ನಾದಿರಾ ಸುಖವಾಗಿಯೇ ಇದ್ದಳು. ಶುಕ್ರವಾರ ರಶೀದ್ ಗೆ ರಜೆ ಆದ್ದರಿಂದ ಮಧ್ಯಾಹ್ನ ಮೇಲೆ ಸಿನಿಮಾ ನೋಡುವ ಹವ್ಯಾಸವಿತ್ತು. ಅದೊಮ್ಮೆ ಕುತೂಹಲದಿಂದ ಸಿನಿಮಾದ ಬಗ್ಗೆ ಪ್ರಶ್ನಿಸುತ್ತಾ ನನಗೂ ಅದನ್ನು ನೋಡಬೇಕೆಂಬ ಹಂಬಲವನ್ನು ವ್ಯಕ್ತಪಡಿಸುತ್ತಾಳೆ. ಆಗಿನ ಕಾಲದಲ್ಲಿ ಹೆಂಗಸರು ಸಿನಿಮಾ ನೋಡಲು ಹೊಗುತ್ತಿರಲಿಲ್ಲ. ಆದ್ದರಿಂದ ರಶೀದ್ ಗೆ ಹೆಂಡತಿಯನ್ನು ಕರೆದೊಯ್ಯಲು ಮನಸ್ಸಿದ್ದರೂ ಸಮಾಜವನ್ನು ಎದುರಿಸುವುದು ಕಷ್ಟ ವಾದ್ದರಿಂದ ಅವತ್ತಿಂದ ಅವನೂ ಸಿನಿಮಾ ನೋಡಲು ಹೋಗುವುದನ್ನು ನಿಲ್ಲಿಸಿದ. ಆ ವೇಳೆಯಲ್ಲಿ ಅನಕ್ಷರಸ್ಥಳಾದ ನಾದಿರಾಗೆ ಓದಲು ಬರೆಯಲು ಕಲಿಸುತ್ತಾನೆ. ಆಕೆಯ ಮನೆಯಲ್ಲಿ ಯಾರೂ ಶಾಲೆಯ ಮುಖವನ್ನೇ ನೋಡದ್ದರಿಂದ ಎಲ್ಲರೂ ಅನಕ್ಷರಸ್ತರಾಗಿದ್ದರು. ವಿದ್ಯೆಯ ಮಹತ್ವ ತಿಳಿಯದ್ದರಿಂದ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಿದ್ದರು. ರಶೀದ್ ನಾದಿರಾಗೆ ಓದಲು ಬರೆಯಲು ಕಲಿಸುತ್ತಾನೆ ವಿದ್ಯೆಯ ಮಹತ್ವವನ್ನು ತಿಳಿಸುತ್ತಾನೆ. ತಾನು ಕಲಿತರೆ ಸಾಲದು ತನ್ನ ಪತ್ನಿಯೂ ಕಲಿಯಬೇಕೆಂಬ ಆಸೆ ಅವನದ್ದು.
. ಅದೊಮ್ಮೆ ತಂಗಿ ಜಮೀಲಾಳ ಮದುವೆಗೆ ಹಣ ಕೇಳಲು ಖಾನರು ಅಳಿಯನಲ್ಲಿಗೆ ಬಂದಾಗ "ನನ್ನಲ್ಲಿ ಹಣವಿಲ್ಲ ಅದನ್ನೆಲ್ಲ ವ್ಯಾಪಾರಕ್ಕೆ ಹಾಕಿದೆ.. ಅಷ್ಟೊಂದು ಹಣ ಒಂದೇ ಬಾರಿಗೆ ನೀಡಲು ನಾನೇನು ಹಣದ ಬ್ಯಾಂಕ್ ಇಟ್ಟಿದ್ಧೇನಾ" ಎಂದು ಖಾರವಾಗಿ ನುಡಿದುಬಿಟ್ಟ. ಖಾನರು ಅಳಿಯನ ಮೇಲೆ ಕೋಪಗೊಂಡು ಆತ ಬಂದು ಕ್ಷಮೆ ಕೇಳಿ ಮಗಳನ್ನು ಕರೆದೊಯ್ಯಲಿ ಎಂದು ನೇರ ಮಗಳ ಮನೆಗೆ ಬಂದು ಆಕೆಯನ್ನೂ ಮಗುವನ್ನೂ ತಮ್ಮ ಮನೆಗೆ ಕರೆತರುತ್ತಾರೆ. ಮಾವನ ಮನದಿಂಗಿತ ರಶೀದ್ ಗೆ ತಿಳಿಯುವುದೂ ಇಲ್ಲ. ತಾನು ಸ್ವಲ್ಪ ದುಡುಕಿದೆನೆಂದನಿಸಿದರೂ ಮಾವನಲ್ಲಿ ಕ್ಷಮೆ ಕೇಳಲು ಹೋಗುವುದಿಲ್ಲ. ಸ್ವಲ್ಪ ದಿನಗಳ ನಂತರ ವಿಷಯ ತಿಳಿದ ನಾದಿರ ತುಂಬ ದುಃಖ ಪಡುತ್ತಾಳೆ. ತಾಯಿ ಎಷ್ಟೇ ಕೇಳಿಕೊಂಡರೂ ಖಾನರು ತಮ್ಮ ಹಟ ಬಿಡುವುದಿಲ್ಲ. ರಶೀದ್ ಪತ್ರಗಳ ಮೂಲಕ ಪತ್ನಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾನೆ. ಮೀನು ಮಾರುವ ಪಾರು ಇವರ ನಡುವೆ ಮಧ್ಯಸ್ತಿಕೆ ವಹಿಸಿದರೂ ಕಾರ್ಯ ಸಫಲವಾಗುವುದಿಲ್ಲ. ಮನೆಯಿಂದ ಮಗುವಿನೊಂದಿಗೆ ಬಂದು ಬಿಡು ಎಂದು ರಶೀದ್ ಕೇಳಿಕೊಂಡರೂ ಅಪ್ಪನನ್ನು ಧಿಕ್ಕರಿಸಿ ನಾದಿರಾಗೆ ಒಬ್ಬಳೇ ಚಂದ್ರಗಿರಿಯನ್ನು ದಾಟುವಷ್ಟು ಧೈರ್ಯವಿಲ್ಲ. ಇಲ್ಲಿ ಹಳ್ಳಿಯ ಹೆಣ್ಣು ಗಂಡಿನ ಸಹಾಯವಿಲ್ಲದೆ ಒಬ್ಬಳೇ ನದಿಯನ್ನು ದಾಟುವಷ್ಟು ಧೈರ್ಯ ಹೊಂದಿಲ್ಲ, ಎಲ್ಲದಕ್ಕೂ ಗಂಡಿನ ಆಶ್ರಯವನ್ನು ಪಡೆಯುವುದು ಕಾಣಬಹುದು. ಗಂಡನ ಪತ್ರಗಳಿಗೆ ಪ್ರತಿಕ್ರಿಯೆ ನೀಡಲಾಗದೆ ನಾದಿರ ಅಸಹಾಯಕಳಾಗುತ್ತಾಳೆ. ಏಕೆಂದರೆ ಆ ಮನೆಯಲ್ಲಿ ಹಾಳೆ.ಮತ್ತು ಪೆನ್ನು ಸ್ಥಾನ ಪಡೆದುಕೊಂಡಿರಲಿಲ್ಲ. ಅಪ್ಪನ ಎದುರು ನಿಂತು ಧೈರ್ಯದಿಂದ ಮಾತನಾಡಲೂ ಆಕೆಗೆ ಭಯ. ಅತ್ತೆ ಬಂದು ಮಗುವನ್ನು ಮಾತ್ರ ಹೇಳದೆ ಕೇಳದೆ ಕೊಂಡೊಯ್ಯುವಾಗ ಹೆಣ್ಣಿಗೆ ಹಣ್ಣಿನಿಂದಲೆ ಅನ್ಯಾಯ ನಡೆಯುವುದನ್ನು ಕಾಣಬಹುದು. ತಾಯಿ ಮಗುವನ್ನು ಬೇರ್ಪಡಿಸುವಷ್ಟು ಅತ್ತೆ ಆಮಿನಳ ಹೃದಯ ಕಲ್ಲಾಗಿರುವುದನ್ನು ಕಾಣಬಹುದು. ಎದೆ ಹಾಲು ಕುಡಿಯುವುದನ್ನು ನಿಲ್ಲಿಸದ ಮಗುವನ್ನು ಕೊಂಡೊಯ್ದಾಗ ನಾದಿರಾಳಿಗೆ ಎದೆಯಲ್ಲಿ ಅತಿಯಾದ ನೋವು ಕಾಣಿಸುತ್ತದೆ. ಆದರೆ, ತಾಯಿಗೆ ಎಲ್ಲವೂ ಅರ್ಥವಾದರೂ ಮಗಳಿಗಾಗಿ ಅವರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಇಲ್ಲಿ ಹೆಣ್ಣೆ ಗಂಡು ಹೇಳಿದಂತೆ ಕೇಳಿಕೊಂಡಿರಬೇಕಾದ ಪರಿಸ್ಥಿತಿಯನ್ನು ಕಾಣಬಹುದು. ಎರಡು ಕುಟುಂಬದವರು ಕೂತು ಮಾತಾಡಿ ಬಗೆಹರಿಸಬಹುದಾದ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಾ ಹೋಗುತ್ತದೆ. ತಮ್ಮ ಅಹಂ.ನಿಂದ ಇಬ್ಬರೂ ಸಂಧಾನಕ್ಕೆ ತಯಾರಾಗದಿರುವುದನ್ನು ಗಮನಿಸಬಹುದು. ತಂಗಿ ಮದುವೆಯಾಗಿ ಸುಖವಾಗಿರುವಾಗ ತನ್ನದಲ್ಲದ ತಪ್ಪಿಗೆ ಗಂಡ ಮಗುವಿನಿಂದ ದೂರಾಗಿ ಕೊರಗುವ ಹೆಣ್ಣಿನ ಮನಸ್ಥಿಯನ್ನು ಅರಿವವರಾರೂ ಅಲ್ಲಿರಲಿಲ್ಲ, ಇದ್ದ ತೋಯಿಯೂ ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತಿದ್ದಾಳೆ.
ಖಾನರಿಗೆ ಅಳಿಯ ಬಂದು ಕ್ಷಮೆ ಕೇಳಃತ್ತಾನೆಂಬ ನಿರೀಕ್ಷೆ ಸುಳ್ಳಾದೊಡನೆ ಸುಳ್ಳು ಹೇಳಿ ಆತನಿಂದ ತಲಾಖ್ ಪಡೆದುಕೊಂಡು ಬರುತ್ತಾನೆ. ಮಾವನ ಸ್ವಭಾವವನ್ನು ಚೆನ್ನಾಗರಿತಿದ್ಧ ರಶೀದ್ ಗೆ ಆಲೋಚನೆ ಮಾಡುವಷ್ಟು ತಾಳ್ಮೆಯೂ ಇರುವುದಿಲ್ಲ . ತನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ನಾದಿರ ತಲಾಖ್ ಕೇಳಿದ್ದು ಸುಳ್ಳೆಂದು ತಿಳಿಯುವಷ್ಟು ಬದ್ಧಿಯೂ ಕೆಟ್ಟು ಹೋಗಿದ್ದರಿಂದ ಮಾವ ಕೇಳಿದೊಡನೆ ಹಿಂದು ಮುಂದು ಆಲೋಚಿಸದೆ ತಲಾಖ್ ಕೊಟ್ಟು ಬಿಡುತ್ತಾನೆ.. ಯಾವತ್ತೂ ಕೂಡ ಕೋಪದ ಕೈಗೆ ಬುದ್ಧಿಯನ್ನು ಕೊಡಬಾರದು. ಇಲ್ಲಿ ಮಾವ ಅಳಿಯ ಇಬ್ಬರೂ ದುಡುಕಿದ್ದರಿಂದ ನಾದಿರಾಳ ಬಾಳೇ ಕತ್ತಲೆಯಾಯಿತು.
"ಒಬ್ಬನು ತನ್ನ ಹೆಂಡತಿಗೆ ಮೂರು ತಲೋಖ್ ನೀಡಿದ ಬಳಿಕ ಆ ಸಂಬಂಧ ಎಂದೆಂದಿಗೂ ಮುರಿದು ಬಿದ್ಧಂತೆ. ಮೂರು ತಲಾಖ್ ಬೇರೆಬೇರೆಯಾಗಿ ಒಂದೊಂದು ತಿಂಗಳ ಅಂತರದಲ್ಲಿ ಹೇಳಬೇಕು ಮತ್ತು ಮೂರನೇ ತಲಾಖ್ ಹೇಳುವವರೆಗೂ ಆಕೆ ಗಂಡನ ಮನೆಯಲ್ಲಿ ಇರಬೇಕೆಂದು ಖುರ್ ಆನ್ ಸ್ಪಷ್ಟಪಡಿಸುತ್ತದೆ. ಮೂರು ತಿಂಗಳವರೆಗೆ ಗಂಡ ಹೆಂಡತಿ ಒಂದೇ ಮನೆಯಲ್ಲಿದ್ದರೆ ಆ ಅವಧಿಯಲ್ಲಿ ಅವರ ಪುನರ್ಮೈತ್ರಿ ಆಗೇ ಆಗುತ್ತದೆಂಬ ವಿಶ್ವಾಸದಿಂದ ಖುರ್ ಆನ್ ಈ ರೀತಿ ತಾಕೀತು ಮಾಡಿರಬಹುದು. ಮೂರು ತಿಂಗಳವರೆಗೆ ಜೊತೆಯಲ್ಲಿದ್ಧೂ ಪುನರ್ಮೈತ್ರಿ ಸಾಧ್ಯವಾಗದಿದ್ದರೆ ಅಂತಹ ದಾಂಪತ್ಯ ಪುನಃ ಚಿಗುರಲಾರದು. ಆದ್ದರಿಂದ ಆಕೆ ಬೇರೊಬ್ಬನನ್ನು ವಿವಾಹವಾಗಬಹುದು."ಎಂಬುದು ಖುರ್ ಆನ್ ನ ಉದ್ದೇಶವೆಂದು ಲೇಖಕಿ ಸ್ಪಷ್ಟಪಡಿಸುತ್ತಾರೆ. ಎಲ್ಲಾ ದುರಂತಕ್ಕೂ ಹೆಣ್ಣನ್ನೇ ಬೊಟ್ಟು ಮಾಡಿ ತೋರಿಸುವ ಪುರುಷ ಪ್ರಧಾನ ಸಮಾಜ ಇಲ್ಲೂ ಹೆಣ್ಣನ್ನು ಕೈಗೊಂಬೆಯಂತೆ ಕುಣಿಸುವುದನ್ನು ಕಾಣಬಹುದು. ವಿಚ್ಛೇದನ ಸಂದರ್ಭದಲ್ಲಿ ಗಂಡನಾದವನು ಒಂದೇ ಬಾರಿ ಮೂರ್ ತಲಾಖ್ ಹೇಳಿ ವಿಚ್ಛೇದನ ನೀಡುವುದನ್ನು ನೋಡಬಹುದು. ಕೊನೆಗೆ ಎಲ್ಲಾ ದ್ವೇಷಗಳೂ ಕರಗಿ ಅವರಿಬ್ಬರು ಒಂದಾಗಲು ಬಯಸಿದಾಗ ಮತ್ತೊಂದು ನಿಯಮ ಅಡ್ಡಬರುವುದನ್ನು ಕಾಣಬಹುದು. "ಮೂರನೇ ತಲಾಖ್ ಆದ ಮೇಲೆ ಆ ಸಂಬಂಧವನ್ನು ಪುನಃ ಕೂಡಿಸಬೇಕಾದರೆ ಆಕೆ ಬೇರೊಬ್ಬನನ್ನು ವಿವಾಹವಾಗಿ ಆತನಿಂದ ವಿಚ್ಛೇದನ ಪಡೆದು ಬಂದವಳಾಗಿರಬೇಕು. ಅಂತಹ ಸಂದರ್ಭದಲ್ಲಿ ಮಾತ್ರ ಪುನರ್ವಿವಾಹವಾಗಬಹುದಾಗಿತ್ತು. ಗಂಡನಾದವನು ತಲಾಖ್ ನೀಡುವಾಗ ಚೆನ್ನಾಗಿ ಆಲೋಚಿಸಿ ತಾನು ಎಂದಿಗೂ ಈ ಮಡದಿಯೊಂದಿಗೆ ಬಾಳಲಾರೆನೆಂಬ ದೃಢ ನಿರ್ಧಾರದಿಂದ ಈ ಮೂರನೇ ತಲಾಖ್ ನೀಡಬೇಕು" ಎಂಬುದು ಖುರ್ ಆನ್ ನ ಅರ್ಥ. ಆದರೆ, ಆದನ್ನೇ ಸರಿಯಾಗಿ ಜನರು ಅರ್ಥ ಮಾಡಿಕೊಳ್ಳದೆ ತಮಗಿಷ್ಟ ಬಂದಂತೆ ನಡೆದುಕೊಳ್ಳುವುದು, ಆಮೇಲೆ ಪಶ್ಚಾತ್ತಾಪ ಪಡುವುದನ್ನು ಕಾಣಬಹುದು.
ಹಾಗೆಯೇ ಇಲ್ಲೂ ಖಾನರಿಗೆ ತನ್ನ ತಪ್ಪಿನ ಅರಿವಾದಾಗ ಪಶ್ಚಾತ್ತಾಪಗೊಂಡು ಅಳಿಯ ಮಗಳನ್ನು ಒಂದು ಮಾಡಲು ಹೊರಡುವರು. ರಶೀದ್ ಗೆ ನಾದಿರಾಳನ್ನು ಸೇರಬೇಕೆಂಬ.ಬಲವಾದ ಹಂಬಲವಿದ್ಧರಿಂದ ಆಕೆಗೆ ಮತ್ತೊಬ್ಬನೊಡನೆ ವಿವಾಹವಾಗಲು ಕೇಳಿಕೊಳ್ಳುತ್ತಾನೆ. ಆಕೆಗೆ ಅತ್ತೆ ಗಂಡ ಧೈರ್ಯ ತುಂಬುತ್ತಾರೆ. ಎಲ್ಲರ ಒತ್ತಾಸೆಗೆ ಮಣಿದು ಮನಸ್ಸಿಲ್ಲದ ಮನಸ್ಸಿನಿಂದ ಮತ್ತೊಬ್ಬನೊಡನೆ ವಿವಾಹವಾಗುತ್ತಾಳೆ. ಅವಳ ಮನಸ್ಸು ಪೂರ್ತಿ ರಶೀದ್ ತುಂಬಿರುವಾಗ ಆತನನ್ನೇ.ಗಂಡನೆಂದು ಸ್ವೀಕರಿಸಿ ತನ್ನ ತನು ಮನವನ್ನರ್ಪಿಸಿದ ಆಕೆಗೆ ಈಗ ಇನ್ನೊಬ್ಬನೊಡನೆ.ಒಂದು ರಾತ್ರಿ ಕಳೆಯುವದನ್ನು ನೆನೆಯಲೂ ಸಾಧ್ಯವಾಗೂತ್ತಿಲ್ಲ.. ಕೊನೆಗೆ ಬೇರೆ ದಾರಿಯಿಲ್ಲದೆ, ಆಕೆ ಮದರಾಸದ ಬಳಿಯ ಕೆರೆಯಲ್ಲಿ ತನ್ನ ಕೊನೆಯುಸಿರೆಳೆಯುತ್ತಾಳೆ. ಯಾರದೋ ತಪ್ಪಿಗೆ.ಮತ್ಯಾರಿಗೋ ಶಿಕ್ಷೆ. ಅಪ್ಪನ ಹಟ, ಗಂಡನ ದುಡುಕಿನಿಂದಾಗಿ ನಾದಿರಾಳ ಜೀವನ, ಕನಸು ಎಲ್ಲವೂ ನುಚ್ಚುನೂರಾಗುತ್ತದೆ. ಹೀಗೆ ಬದುಕು ಅರಳುವ ಮೊದಲೇ ಬಾಡಿ ಹೋಗುವ ದುರಂತ ಈ ಕಾದಂಬರಿಯಲ್ಲಿ ಕಾಣಬಹುದು.. ಜೊತೆಗೆ ಬಾಲ್ಯ ವಿವಾಹ, ಹೆಣ್ಣನ್ನು ಭೋಗದ ವಸ್ತುವಾಗಿ ಪರಿಗಣಿಸುವುದು, ಶಿಕ್ಷಣದ ಮಹತ್ವ, ವರದಕ್ಷಿಣೆಯ ಸಮಸ್ಯೆ , ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಚನೀಯ ಸ್ಥಿತಿ, ದುಡುಕಿನ ನಿರ್ಧಾರದಿಂದ ಪಶ್ಚಾತ್ತಾಪ, ಬಿರುಕು ಬಿಟ್ಟ ಸಂಬಂಧ ಪುನಃ ಕೂಡಬೇಕೆಂದಾಗ ಅಡ್ಡ ಬರುವ ನಿಯಮಗಳು ಎಲ್ಲವನ್ನೂ ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ.
ಬರಹ:ಚೇತನಾ ಕುಂಬ್ಳೆ