ಪುಸ್ತಕ: ತಲ್ಲಣಗಳ ಪಲ್ಲವಿ
ಲೇಖಕರು: ಅನುಪಮಾ ರಾಘವೇಂದ್ರ ಉಡುಪುಮೂಲೆ
ವಿಮರ್ಶೆ: ಚೇತನಾ ಕುಂಬಳೆ
ನೃತ್ಯ ಶಿಕ್ಷಕಿಯಾಗಿರುವ ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರು ಕಾಸರಗೋಡಿನ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ನಾಟ್ಯ ವಿದುಷಿಯೂ, ಎಡನೀರಿನ ಭೂಮಿಕಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆಯೂ ಆಗಿರುವ ಇವರು ಬಹುಮುಖ ಪ್ರತಿಭೆಯವರು. ಇತ್ತೀಚೆಗೆ ಯಕ್ಷಗಾನ ಕ್ಷೇತ್ರಕ್ಕೂ ಪ್ರವೇಶಿಸಿದ ಅನುಪಮಾ ಅವರು ಈಗಾಗಲೇ 'ಕಲಾತರಂಗ ಕಲಾಂತರಂಗ' ಎಂಬ ಲೇಖನ ಸಂಕಲನವನ್ನೂ, 'ಹತ್ತಗುಳು' ಎಂಬ ಹವ್ಯಕ ಕಥಾ ಸಂಕಲನವನ್ನೂ ಪ್ರಕಟಿಸಿದ್ದಾರೆ.
ಕಳೆದ ಎಪ್ರೀಲ್ 24 ರಂದು ಎಡನೀರು ಮಠದಲ್ಲಿ ಶ್ರೀಗುರುಗಳ ದಿವ್ಯ ಹಸ್ತದಿಂದ ಇವರ ಮೂರನೇ ಕೃತಿ 'ತಲ್ಲಣಗಳ ಪಲ್ಲವಿ' ಕಥಾ ಸಂಕಲನವು ಬಿಡುಗಡೆಗೊಂಡಿತು. ಭೂಮಿಕಾ ಪ್ರತಿಷ್ಠಾನದಿಂದ ಪ್ರಕಟಗೊಂಡ ಈ ಸಂಕಲನಕ್ಕೆ ಡಾ. ಹರಿಕೃಷ್ಣ ಭರಣ್ಯ ಅವರು ಮುನ್ನುಡಿ ಬರೆದಿದ್ದಾರೆ. ಶ್ರೀಮತಿ ಪ್ರಸನ್ನ ವಿ. ಚೆಕ್ಕೆಮನೆಯವರು ಬೆನ್ನುಡಿ ಬರೆದಿದ್ದಾರೆ. ಇದರಲ್ಲಿ ಒಟ್ಟು 12 ಸಣ್ಣ ಕಥೆಗಳಿದ್ದು ಬೇಗನೆ ಓದಿ ಮುಗಿಸಬಹುದಾಗಿದೆ. ಅವರು ಗೃಹಿಣಿಯಾಗಿದ್ದರೂ ಸಮಾಜದೊಳಗಿನ ಸೂಕ್ಷ್ಮ ವಿಚಾರಗಳನ್ನು ಗಮನಿಸುವುದನ್ನು ಕಾಣಬಹುದು. ವಿಚಾರಗಳನ್ನು ಗ್ರಹಿಸಿ ಭಿನ್ನವಾದ ವಸ್ತುಗಳನ್ನಿಟ್ಟುಕೊಂಡು ತನ್ನದೇ ಆದ ಶೈಲಿಯಲ್ಲಿ ಕಥೆಗಳನ್ನು ಕಟ್ಟಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಕಥೆ 'ಜೀವಜಲ'ದಲ್ಲಿ, ಅಣ್ಣ ಶಂಕರ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯೊಂದಿಗೆ ಕೃಷಿ ಮಾಡುತ್ತಾ ಬದುಕುತ್ತಾನೆ. ಹೊರ ದೇಶಗಳಲ್ಲಿ ದುಡಿಯುವವರಿಗೆ ಕೆಲಸ ಖಾಯಂ ಅಲ್ಲ. ಆರ್ಥಿಕ ಕುಸಿತ ಉಂಟಾಗುವಾಗ ಕಂಪೆನಿಯವರು ನೌಕರರನ್ನು ಮರಳಿ ಊರಿಗೆ ಕಳಿಸುವಾಗ ಅವರಿಗೆ ಹುಟ್ಟೂರೇ ಗತಿ ಎಂಬ ಸತ್ಯದ ದರ್ಶನವಾಗುತ್ತದೆ. ತಪ್ಪುತಿಳುವಳಿಕೆಯಿಂದ ಅಣ್ಣನ ಮೇಲೆ ಅಸಮಾಧಾನವಿದ್ದ ಶಶಾಂಕನಿಗೆ ಕೊನೆಗೆ ಹೊಸ ಬದುಕು ಕಟ್ಟಿಕೊಳ್ಳಲು ಅಣ್ಣನ ಸಹಾಯವನ್ನೇ ಸ್ವೀಕರಿಸಬೇಕಾಗುತ್ತದೆ. ಇಲ್ಲಿ ಶಂಕರ್ ಅಣ್ಣನಾಗಿ, ಅಪ್ಪನಾಗಿ ಕಾಣಿಸುತ್ತಾನೆ.
'ಮರೆತೇನೆಂದರು ಮರೆಯಲಿ ಹ್ಯಾಂಗ' ಕಥೆಯಲ್ಲಿ ಮನೆಯಲ್ಲಿರುವವರನ್ನು ನಾವು ಹೇಗೆ ಪ್ರೀತಿಸುತ್ತೇವೋ ಹಾಗೆಯೇ ಸಾಕಿದ ಪ್ರಾಣಿಗಳನ್ನೂ ಅಷ್ಟೇ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವುದನ್ನು ಕಾಣಬಹುದು. 'ಆ ಮಾತು' ಕಥೆಯಲ್ಲಿ ಒಬ್ಬ ಗುರುವಾಗಿದ್ದು ತನ್ನ ಮಗಳಿಗೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಬದಲು, ಸ್ವಂತ ಸುಖಕ್ಕಾಗಿ ಹಿರಿಯರನ್ನೂ ದೂರವಿರಿಸಲು ಕಿವಿಮಾತು ಹೇಳುವುದನ್ನು ಕಾಣುವಾಗ ಆತನ ಮೇಲಿಟ್ಟ ನಂಬಿಕೆ ಒಡೆದುಹೋಗುತ್ತದೆ.
'ಅನಾಘ್ರಾಣಿತ ಕುಸುಮ' ಕಥೆಯಲ್ಲಿ ಸಂಪತ್ತಿನ ಮುಂದೆ ಸಂಬಂವಗಳೂ ಮೌಲ್ಯ ಕಳೆದುಕೊಳ್ಳುತ್ತವೆ. ಗಂಡನಿಂದ ವಿಚ್ಛೇದನ ಪಡೆದ ಹೆಣ್ಣೊಬ್ಬಳು ಸಮಾಜದಲ್ಲಿ ಬದುಕಲು ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯುವುದು, ಯಾರ ಹಂಗೂ ಇಲ್ಲದೆ ಆಕೆಯನ್ನು ಬೆಳೆಸಲು ಪಟ್ಟ ಕಷ್ಟ, ಮದುವೆ ಮಾಡಿಸಿ ಮೊಮ್ಮಕ್ಕಳನ್ನಾಡಿಸುತ್ತಾ ಆಕೆ ತನ್ನ ನೋವನ್ನು ಮರೆಯುವ ಚಿತ್ರಣವಿದೆ.
'ಯಶೋದೆ...ಕೃಷ್ಣನ ಬೆಳೆಸಿದರೇನು... ಕಥೆಯಲ್ಲಿ ಲಾವಣ್ಯ ಮೂರು ಬಾರಿ ತನ್ನ ಮಗುವನ್ನು ಕಳೆದುಕೊಂಡಾಗ ಕೆಲಸದಾಕೆ ಕಮಲಿಯ ಮಗುವನ್ನು ತನ್ನ ಮಗುವೆಂದೇ ಸಾಕುತ್ತಾಳೆ. ಮುಂದೊಂದು ದಿನ ಮಗುವಿನ ಜನ್ಮ ರಹಸ್ಯ ತಿಳಿಯುವಾಗ ಕೆಲಸದಾಕೆ ಕಮಲಿಯ ಮೇಲೆ ಕನಿಕರಗೊಳ್ಳುತ್ತಾಳೆ. ಲಾವಣ್ಯನ ಸಣ್ಣ ಮನಸ್ಸಿನ ಮುಂದೆ ಕಮಲಿಯ ಹೃದಯ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತಾರೆ. ಧಾತ್ರಿಯ ಸ್ಥಿತಿಯನ್ನು ಯಶೋದಾ ನಂದನ ಕೃಷ್ಣನಿಗೆ ಹೋಲಿಸುತ್ತಾರೆ.
ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯೊಂದು ಅವ್ಯಕ್ತ ಕಥೆಯಲ್ಲಿದೆ. ಹೆತ್ತವರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವುದನ್ನು, ಮಕ್ಕಳ ಕನಸುಗಳಿಗೆ ಬಣ್ಣ ಬಳಿಯದೆ ಅವರ ನಿರ್ಧಾರಗಳಿಗೆ ಆಸೆ-,ಆಕಾಂಕ್ಷೆಗಳಿಗೆ ಮನ್ನಣೆ ನೀಡದೆ ತಮ್ಮ ನಿರ್ಧಾರಗಳನ್ನು ಅವರ ಮೇಲೆ ಹೇರಿ ತಮ್ಮದೇ ದಾರಿಯಲ್ಲಿ ಅವರನ್ನು ನಡೆಸುವುದನ್ನೂ, ಕೊನೆಗೆ ಮಕ್ಕಳ ಸಾವಿಗೂ ಕಾರಣವಾಗುವುದನ್ನು ಗಮನಿಸಬಹುದು.
'ಜ್ವಾಲಾಮುಖಿ' ಕಥೆಯಲ್ಲಿ ಮಹಾ ಭಾರತದಲ್ಲಿ ಬರುವ ಅಂಬೆಯ ಪಾತ್ರವನ್ನು ವಿಭಿನ್ನ ನೆಲೆಯಲ್ಲಿ ಚಿತ್ರಿಸಿದ್ದಾರೆ.
'ಸಮರ್ಪಣೆ' ಕಥೆಯಲ್ಲಿ ಲೇಖಕಿಗೆ ಯಕ್ಷಗಾನದ ಮೇಲಿರುವ ಅಪಾರ ಪ್ರೀತಿ ಗೋಚರಿಸುತ್ತದೆ. ಯಕ್ಷಗಾನದ ನಡುವೆ ನಡೆಯುವ ಹಾಸ್ಯಪ್ರಸಂಗಗಳನ್ನು ಮೆಲುಕು ಹಾಕುತ್ತಾ ಕೇಚ ಎಂಬ ಕೇಶವನ ಮೂಲಕ ತನ್ನ ಜೀವನವನ್ನೇ ಯಕ್ಷಗಾನಕ್ಕಾಗಿ ಮುಡಿಪಾಗಿರಿಸುವ ಕಲಾವಿದನನ್ನು ಪರಿಚಯಿಸುತ್ತಾರೆ.
'ಮತ್ತೆ ಹಾಡಿತು ಕೋಗಿಲೆ' ಕಥೆಯಲ್ಲಿ ವಿಧವೆಯಾದ ಜಯಶ್ರೀಯ ಬಾಳಿಗೆ ಪ್ರಸನ್ನನ ಆಗಮನವಾದಾಗ ಅವರ ಬದುಕಿನಲ್ಲಿ ಮತ್ತೊಮ್ಮೆ ವಸಂತಕಾಲ ಬರುತ್ತದೆ. 'ಕ್ವಚದಪಿ ಕುಮಾತಾ ನ ಭವತಿ...' ಕಥೆಯಲ್ಲಿ ಸಹನಾ- ಕಿಶೋರ್ ದಂಪತಿಗೆ ಅವಳಿ ಮಕ್ಕಳಾದಾಗ ಗಂಡು ಮಗು ಆರೋಗ್ಯದಿಂದಿದ್ದರೂ, ಹೆಣ್ಣು ಮಗುವಿಗೆ ಸೊಂಟದಿಂದ ಕೆಳಗೆ ಊನವಾಗಿತ್ತು. ಹೆತ್ತ ತಾಯಿಯೇ ಆ ಮಗುವನ್ನು 'ಅಮ್ಮ ತೊಟ್ಟಿಲು' ಕೇರ್ ಟೇಕಿಂಗ್ ಹೋಮ್ ಗೆ ಕಳುಹಿಸುವಾಗ ಮಗ ಅನ್ವಿತ್ ತಂಗಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ತಾಯಿ ತಂದೆಯರಿಗಿರಬೇಕಾದ ಕಾಳಜಿ ಪ್ರೀತಿ ಅನ್ವಿತ್ ಗೆ ತಂಗಿಯಲ್ಲಿದೆ. ಆಕೆ ಸವಾರ್ಂಗೀಣ ಬೆಳವಣಿಗೆಗೆ, ಆಕೆಯ ಉಜ್ವಲ ಭವಿಷ್ಯ ರೂಪಿಸುವಲ್ಲಿ ಅಣ್ಣನ ಪಾತ್ರ ದೊಡ್ಡದು. ಮುಂದೆ ಅನಿತ ಸಂಗೀತದಲ್ಲಿ ಸಾಧನೆ ಮಾಡಿದಾಗ ಮಗನ ಮುಂದೆಯೇ ಅಪ್ಪ ಅಮ್ಮ ಚಿಕ್ಕವರಾಗಿಬಿಡುತ್ತಾರೆ.
ಶಾಂತ..ಮ್ಮಾ..., ನಾಲ್ಕು ದಿನದ ಈ ಬದುಕಿನಲ್ಲಿ, ಎಂಬ ಕಥೆಗಳೂ ಈ ಸಂಕಲನದಲ್ಲಿ ಗಮನ ಸೆಳೆಯುತ್ತವೆ.
ಇಲ್ಲಿನ ಕಥೆಗಳಲ್ಲಿ ಸಂದರ್ಭೋಚಿತವಾಗಿ ಸಂಸ್ಕೃತದ ವಾಕ್ಯಗಳನ್ನೂ ಬಳಸಿರುತ್ತಾರೆ.
ಅವರ ಕಥೆಗಳಲ್ಲಿ ಆರೋಗ್ಯಕರವಾದ ಕೌಟುಂಬಿಕ ಚಿತ್ರಣವಿದೆ. ಸಮಾಜಕ್ಕೊಂದು ಸಂದೇಶವಿದೆ. ಸಂಪತ್ತಿಗಿಂತಲೂ ಸಂಬಂಧಗಳಿಗೆ ಪ್ರಾಧಾನ್ಯ ನೀಡುತ್ತಾರೆ. ಪ್ರೀತಿ, ನಂಬಿಕೆಗಳಿಂದಲೇ ಸಂಬಂಧಗಳು ಗಟ್ಟಿಯಾಗಿ ನೆಲೆನಿಲ್ಲುತ್ತವೆ ಎಂಬುದನ್ನು ಕಥೆಗಳ ಮೂಲಕ ತಿಳಿಸುತ್ತಾರೆ. ಇಲ್ಲಿನ ಹೆಚ್ಚಿನ ಕಥೆಗಳೂ ಕೂಡ ಸುಖಾಂತ್ಯವನ್ನು ಕಾಣುತ್ತವೆ. ಇಲ್ಲಿನ ಕಥೆಗಳೆಲ್ಲವೂ ಒಂದಕ್ಕಿಂತ ಒಂದು ವ್ಯತ್ಯಸ್ಥವಾಗಿದ್ದು ಓದುಗರಲ್ಲಿ ಕುತೂಹಲ ಮೂಡಿಸುತ್ತಾ ಓದಿಸಿಕೊಂಡು ಹೋಗುತ್ತವೆ.
ಚೇತನಾ ಕುಂಬ್ಳೆ