ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಗರಣದ ಆರೋಪಿ ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಸೆ. 2ರವರೆಗೆ ಸಿಬಿಐ ಕಸ್ಟಡಿ ವಿಸ್ತರಿಸಿ ದೆಹಲಿ ಕೋರ್ಟ್ ನಿನ್ನೆ ಆದೇಶ ನೀಡಿದೆ.
ಆ.21 ರಂದು ಸಿಬಿಐ ನಿಂದ ಬಂಧನಕ್ಕೊಳಗಾಗಿದ್ದ ಚಿದಂಬರಂ ಗೆ ಆ.30ರ ವರೆಗೆ ಸಿಬಿಐ ಕಸ್ಟಡಿ ವಿಧಿಸಲಾಗಿತ್ತು. ಈಗ ಅವಧಿ ಮುಕ್ತಾಯಗೊಂಡಿದ್ದು ಮತ್ತೆ ಕೋರ್ಟ್ ಎದುರು ಹಾಜರುಪಡಿಸಲಾಗಿತ್ತು. ಸದ್ಯ ದೆಹಲಿ ಕೋರ್ಟ್ ಸೆ.2ರವರೆಗೆ ಸಿಬಿಐ ಕಸ್ಟಡಿ ಅವಧಿ ವಿಸ್ತರಿಸಿದೆ.
ವಿಚಾರಣೆಗೂ ಮೊದಲು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದ ಚಿದಂಬರಂ ಪರ ವಕೀಲರು ಸೆ.2ರವರೆಗೆ ಸಿಬಿಐ ವಶದಲ್ಲೇ ಇರಲು ಚಿದಂಬರಂಗೆ ಅನುಮತಿ ನೀಡಬೇಕೆಂದು ಕೋರಿದ್ದರು. ಆರ್. ಭಾನುಮತಿ ಹಾಗೂ ಎಎಸ್ ಬೋಪಣ್ಣ ಅವರಿದ್ದ ವಿಭಾಗೀಯ ಪೀಠದೆದುರು ಚಿದಂಬರಂ ಈ ಅರ್ಜಿ ಸಲ್ಲಿಸಿದ್ದರು. ವಿಚಾರಣಾಧೀನ ನ್ಯಾಯಾಲಯ ತಮ್ಮನ್ನು ಸಿಬಿಐ ವಶಕ್ಕೆ ನೀಡಿರುವುದು ಹಾಗೂ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿರುವುದನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸೆ.2 ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.