ನವದೆಹಲಿ: ಫ್ರಾನ್ಸ್ ನಿರ್ಮಿತ ಅತ್ಯಾಧುನಿಕ ಯುದ್ಧ ವಿಮಾನ ರಫಲ್ ಯುದ್ಧ ವಿಮಾನ ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರಲು ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಮತ್ತೆ 63 ಯುದ್ಧ ವಿಮಾನಗಳ ಖರೀದಿಗೆ ಭಾರತೀಯ ವಾಯು ಸೇನೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ ತುಂಬಲು ಕೇಂದ್ರ ಸರ್ಕಾರ 63 ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ ನೀಡಿದೆ ಎನ್ನಲಾಗಿದೆ. ಅದರಂತೆ ಭಾರತೀಯ ವಾಯುಸೇನೆ ರಷ್ಯಾ ನಿರ್ಮಿತ 21 ಮಿಗ್ 29 ಮತ್ತು 12 ಸುಖೋಯ್ ಫೈಟರ್ ಜೆಟ್ ಗಳ ಖರೀದಿಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಇದಕ್ಕಾಗಿ ಮುಂದಿನವಾರ ಐಎಎಫ್ ಅಧಿಕಾರಿಗಳು ಮಹತ್ವಸಭೆ ಕರೆದಿದ್ದು, ಸಭೆಯಲ್ಲಿ ಈ ಕುರಿತಂತೆ ಚರ್ಚೆ ನಡೆಸಲಿದ್ದಾರೆ.
ಕಳೆದ ಹಲವು ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಸಂದರ್ಭದಲ್ಲಿ 12 ಸುಖೋಯ್ 30 ಫೈಟರ್ ಜೆಟ್ ಗಳು ಪತನವಾಗಿದ್ದವು. ಇವುಗಳಿಗೆ ಪರ್ಯಾಯವಾಗಿ 12 ಸುಖೋಯ್ 30 ವಿಮಾನಗಳನ್ನು ಖರೀದಿಸಲಾಗುತ್ತಿದೆ. ಆ ಮೂಲಕ ಭಾರತೀಯ ಸೇನೆಯಲ್ಲಿರುವ ಸುಖೋಯ್ 30 ಎಂಕೆಐ ವಿಮಾನಗಳ ಸಂಖ್ಯೆ ಮತ್ತೆ 272ಕ್ಕೆ ಏರಿಕೆಯಾಗಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಭಾರತಕ್ಕೆ ಇಷ್ಟು ಪ್ರಮಾಣದ ಸುಖೋಯ್ 30 ವಿಮಾನಗಳ ಅನಿವಾರ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೊತೆಗೆ 29 ಮಿಗ್ 29 ಯುದ್ಧ ವಿಮಾನದ ಖರೀದಿ ಕುರಿತು ಮಾತನಾಡಿದ ಅವರು, ಹೊಸ ತಂತ್ರ ಜ್ಞಾ ನ ಮಿಗ್ 29 ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಯ ಬಲ ಹೆಚ್ಚಿಸಲಿವೆ. ಈಗಾಗಲೇ ಈ ಶ್ರೇಣಿಯ ಯುದ್ಧ ವಿಮಾನಗಳು ಸೇನೆಯ ಬತ್ತಳಿಕೆಯಲ್ಲಿ ಇವೆಯಾದರೂ, ನೂತನ ವಿಮಾನಗಳೂ ಇನ್ನೂ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ನೂತನ ಮಿಗ್ 29 ಯುದ್ಧ ವಿಮಾನಗಳ ಖರೀದಿ ಕುರಿತಂತೆ ಚರ್ಚೆ ಚಾಲ್ತಿಯಲ್ದಿದ್ದು ಶೀಘ್ರದಲ್ಲೇ ಈ ಕುರಿತು ಅಂತಿಮ ನಿರ್ಣಯಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.