ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ ಡಿ ಎ ಸರ್ಕಾರ ಸೋಮವಾರ ಭಾರಿ ಮಹತ್ವದ ನಿರ್ಧಾರ ಕೈಗೊಂಡಿದೆ. ಕಾಶ್ಮೀರಕ್ಕೆ ಸ್ವಾಯತ್ತತೆ ಕಲ್ಪಿಸುವ 370 ನೇ ವಿಧಿಯನ್ನು ರದ್ದುಪಡಿಸಿದೆ. 35 ನೇ ವಿಧಿಯನ್ನು ಸಹ ರದ್ದುಪಡಿಸುವ ನಿರ್ಣಯ ಘೋಷಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಈ ಸಂಬಂಧ ಹೇಳಿಕೆ ನೀಡಿದ ವೇಳೆ ಪ್ರತಿಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದವು.. ವಿರೋಧಪಕ್ಷಗಳ ಆಕ್ರೋಶದ ನಡುವೆಯೇ ಅಮಿತ್ ಶಾ ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷಾಧಿಕಾರಗಳನ್ನು ರದ್ದುಪಡಿಸಲು ಸಂಬಂಧಿಸಿದ ವಿಧೇಯಕಗಳನ್ನು ಮಂಡಿಸಿದರು. ಸಂವಿಧಾನದ 35 ಎ ವಿಧಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ.
ಕಲಂ 35 ಎ ಏನು ಹೇಳುತ್ತದೆ...?
ಜಮ್ಮು ಮತ್ತು ಕಾಶ್ಮೀರದ ಖಾಯಂ ನಿವಾಸಿ ಯಾರು? ಎಂಬುದನ್ನು 35 ಎ ವಿಧಿ ವಿವರಿಸುತ್ತದೆ. ಅವರ ಸ್ಥಿರಾಸ್ತಿ ಹಕ್ಕುಗಳನ್ನು ನಿರ್ಧರಿಸುತ್ತದೆ. ಕಲಂ -35 ಎ ಅನ್ನು 1954 ರ ರಾಷ್ಟ್ರಪತಿ ಆದೇಶದ ಮೂಲಕ ಸಂವಿಧಾನಕ್ಕೆ ಸೇರ್ಪಡೆಗೊಳಿಸಲಾಯಿತು.
35 ಪ್ರಕಾರ ..... 1954 ರ ಮೇ 14 ರ ಮೊದಲು ಅಥವಾ ನಂತರ ರಾಜ್ಯದಲ್ಲಿ ಜನಿಸಿದ ಅಥವಾ ಹತ್ತು ವರ್ಷಗಳ ಕಾಲ ರಾಜ್ಯದಲ್ಲಿ ವಾಸಿಸಿದ ವ್ಯಕ್ತಿಯು ಕಾಶ್ಮೀರದ ಖಾಯಂ ನಿವಾಸಿಯಾಗುತ್ತಾನೆ. ವ್ಯಕ್ತಿಯು ರಾಜ್ಯದಲ್ಲಿ ಸ್ಥಿರಾಸ್ತಿ ಹೊಂದಬಹುದು. ರಾಜ್ಯ ಸರ್ಕಾರದ ಉದ್ಯೋಗ, ಸರ್ಕಾರಿ ವಿದ್ಯಾರ್ಥಿವೇತನ ಮುಂತಾದ ವಿಶೇಷ ಸೌಲಭ್ಯ ಪಡೆಯಬಹುದು. ರಾಜ್ಯದಲ್ಲಿ ದೀರ್ಘಕಾಲ ವಾಸಿಸುತ್ತಿರುವವರಿಗೆ ರಾಜ್ಯ ಸರ್ಕಾರ ಪ್ರಮಾಣಪತ್ರ ನೀಡಬಹುದು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ, ರಾಜ್ಯದ ನಿವಾಸಿ ಯಾರು ಎಂದು ವ್ಯಾಖ್ಯಾನಿಸಿ ಕಾನೂನುಗಳನ್ನು ಮಾಡುವ ಅಧಿಕಾರವನ್ನು ವಿಧಿ 35 ಎ ನೀಡುತ್ತದೆ. ರಾಜ್ಯ ವಿಧಾನಸಭೆ ವಿಧಿ 35 ಎ ಅಡಿ ಮೂರನೇ ಎರಡು ಬಹುಮತದಿಂದ ಅಧಿಕಾರ ಅಧಿಕಾರ ಚಲಾಯಿಸಬಹುದು. ಕಾಶ್ಮೀರದ ಮಹಿಳೆ ಇತರ ರಾಜ್ಯಗಳ ವ್ಯಕ್ತಿಯನ್ನು ಮದುವೆಯಾದರೆ ಈ ರಾಜ್ಯದಲ್ಲಿ ಆಸ್ತಿಯನ್ನು ಹೊಂದಲು ಆಕೆಗೆ ಸಾಧ್ಯವಿಲ್ಲ. ಅವಳ ಮಕ್ಕಳಿಗೆ ಸಹ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ. ಮಕ್ಕಳಿಗೆ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ.
ಇದು ಹೇಗೆ ಬಂತು..?
ಜುಲೈ 1952 ರಲ್ಲಿ ಅಂದಿನ ನ್ಯಾಷನಲ್ ಕಾನ್ಪರೆನ್ಸ್ ನಾಯಕ ಶೇಖ್ ಅಬ್ದುಲ್ಲಾ( ಫಾರೂಕ್ ಅಬ್ದುಲ್ಲಾ ತಂದೆ, ಓಮರ್ ಅಬ್ದುಲ್ಲಾ ತಾತ) ಮತ್ತು ಆಗಿನ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ನಡುವೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಎಲ್ಲಾ ಕಾಶ್ಮೀರಿಗಳಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ. ರಾಜ್ಯದ ಜನರಿಗೆ ವಿಶೇಷ ಹಕ್ಕುಗಳನ್ನು ನೀಡಲು ಕಾನೂನುಗಳನ್ನು ರೂಪಿಸುವ ಅಧಿಕಾರ ವಿಧಾನಸಭೆಗೆ ನೀಡಲಾಗುತ್ತದೆ. ಈ ನಿಬಂಧನೆಯನ್ನು ಮೇ 14, 1954 ರಂದು ರಾಷ್ಟ್ರಪತಿ ಆದೇಶದ ಪ್ರಕಾರ 35 ಎ ವಿಧಿ ಅಡಿಯಲ್ಲಿ ಸೇರಿಸಲಾಯಿತು.