ವಾಶಿಂಗ್ಟನ್: ಕಾಶ್ಮೀರಕ್ಕೆ ವಿಶೇಷಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದತಿ ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನೂ ಸೆಳೆದಿದ್ದು, ಅಮೆರಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.
ಭಾರತ ಸರ್ಕಾರ ಆರ್ಟಿಕಲ್ 370 ನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲಾ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಇದಕ್ಕೆ ಸಂಬಂಧಪಟ್ಟವರೆಲ್ಲರೂ ಸಹ ಗಡಿ ನಿಯಂತ್ರಣ ರೇಖೆಯಾದ್ಯಂತ ಸ್ಥಿರತೆ-ಶಾಂತಿಯನ್ನು ಕಾಯ್ದುಕೊಳ್ಳಬೇಕೆಂದು ಅಮೆರಿಕ ಸಲಹೆ ನೀಡಿದೆ.
ಪಾಕಿಸ್ತಾನದ ಹೆಸರನ್ನು ತೆಗೆದುಕೊಳ್ಳದೆಯೇ ಮಾತನಾಡಿರುವ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮಾರ್ಗನ್ ಆರ್ಟಾಗಸ್, ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ, ಸಂಬಂಧಪಟ್ಟ ಎಲ್ಲರಿಗೂ ಶಾಂತಿ, ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಲಹೆ ನೀಡುತ್ತೇವೆ ಎಂದಿದ್ದಾರೆ.
ಆರ್ಟಿಕಲ್ 370 ರದ್ದುಗೊಳ್ಳುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ಭಾರತ ಸರ್ಕಾರದ ಕ್ರಮವನ್ನು ಖಂಡಿಸುವುದಾಗಿ ಹೇಳಿತ್ತು. ಅಷ್ಟೇ ಅಲ್ಲದೇ ಕಾಶ್ಮೀರದಲ್ಲಿ ಭಾರತ ಸರ್ಕಾರ ತೆಗೆದುಕೊಂಡಿರುವ ಅಕ್ರಮ ಹಾಗೂ ಏಕಪಕ್ಷೀಯ ಕ್ರಮಕ್ಕೆ ಪ್ರತಿಯಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು.
ಆರ್ಟಿಕಲ್ 370 ರದ್ದತಿ ಘೋಷಣೆಯಾಗುತ್ತಿದ್ದಂತೆಯೇ ಭಾರತದ ವಿದೇಶಾಂಗ ಇಲಾಖೆ ಪಿ5 ರಾಷ್ಟ್ರಗಳ ರಾಯಭಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಅಮೆರಿಕ ಭಾರತದ ಕ್ರಮವನ್ನು ಆಂತರಿಕ ವಿಷಯ ಎಂದು ಹೇಳಿದೆ. ಆದಾಗ್ಯೂ ಜಮ್ಮು-ಕಾಶ್ಮೀರದಲ್ಲಿ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ.