ನವದೆಹಲಿ: ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಕೇರನ್ ವಲಯದಲ್ಲಿ ನಡೆದ ಗುಂಡಿನ ಸಮರದಲ್ಲಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಪಡೆ (ಬಿಎಟಿ) ಯ ಗಡಿ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿದ್ದಾಗಿ ಭಾರತೀಯ ಸೇನೆ ಶನಿವಾರ ಹೇಳಿಕೊಂಡಿದೆ. ಸೇನಾ ಮೂಲಗಳು ಹೇಳಿದಂತೆ ಬಿಎಟಿಯಲ್ಲಿ ಭಾರೀ ಪ್ರಮಾಣದ ಸಾವು ನೋವಾಗಿದ್ದು ನಾಲ್ವರು ವಿಶೇಷ ಸೇವೆಗಳ ಸಮೂಹದ (ಎಸ್‍ಎಸ್‍ಜಿ) ಕಮಾಂಡೋಗಳು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ಕಳೆದ 36 ಗಂಟೆಗಳಲ್ಲಿ ಜೈಷ್ ಇ ಮೊಹಮ್ಮದ್ (ಜೆಎಂ) ಮತ್ತು ಇತರ ಸಂಘಟನೆಗಳ ಭಯೋತ್ಪಾದಕರನ್ನು ಜಮ್ಮು ಕಾಶ್ಮೀರದೊಳಕ್ಕೆ ನುಗ್ಗಿಸಲು ಪಾಕಿಸ್ತಾನ ಸೇನೆಯು ಹಲವಾರು ಪ್ರಯತ್ನಗಳನ್ನು ಮಾಡಿದೆ ಎಂದು ಭಾರತೀಯ ಸೇನೆ ಹೇಳಿಕೆ ತಿಳಿಸಿದೆ. ಕಳೆದ ಕೆಲವು ದಿನಗಳಲ್ಲಿ ಕಣಿವೆ ರಾಜ್ಯದ ಒಳಭಾಗಗಳಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ.
ಜೊತೆಗೆ ಕಳೆದ ಮೂರು ದಿನಗಳಲ್ಲಿ ಪಾಕಿಸ್ತಾನವು ಕಣಿವೆಯಲ್ಲಿ ಶಾಂತಿಯನ್ನು ಭಂಗಗೊಳಿಸಲು ಮತ್ತು ಅಮರನಾಥ ಯಾತ್ರೆ ಅಡ್ಡಿಯುಂಟುಮಾಡಲು ಹಲವಾರು ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಜುಲೈ 31 ಮತ್ತು ಆಗಸ್ಟ್ 1 ರ ಮಧ್ಯರಾತ್ರಿಯಲ್ಲಿ ಬಿಎಟಿ ಗಡಿ ನುಸುಳುವ ಪ್ರಯತ್ನ ಮಾಡಿತ್ತು. ಶೋಧ ಕಾರ್ಯಾಚರಣೆ ಮತ್ತು ಶವಗಳನ್ನು ಮರುಪಡೆಯುವ ಪ್ರಯತ್ನಕ್ಕೆ ಪಾಕಿಸ್ತಾನ ಪಡೆಗಳಿಂದ ನಿರಂತರವಾಗಿ ಅಡ್ಡಿಯಾಗಿದೆ.ಕೇರನ್ ವಲಯದ ಈ ಸ್ಥಳವು ಪಾಕಿಸ್ತಾನದ ಸೇನಾ ಪಡೆಗಳಿಂದ ನಿರಂತರ ಶೆಲ್ ದಾಳಿ ಮತ್ತು ಗುಂಡಿನ ದಾಳಿಗೆ ತುತ್ತಾಗಿದೆ.