ಕಾಸರಗೋಡು/ ಕುಂಬಳೆ/ ಉಪ್ಪಳ: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗಾಳಿ, ಮಳೆ ಮತ್ತೆ ಬಿರುಸುಗೊಂಡಿದ್ದು ಭಾರೀ ನಾಶನಷ್ಟ ಉಂಟಾಗಿದೆ. ಸಿಡಿಲು ಬಡಿದು ದನ-ಕಾರು ಸಾವಿಗೀಡಾಗಿದೆ. ಮೂಸೋಡಿಯಲ್ಲಿ ಇನ್ನೊಂದು ಮನೆ ಸಮುದ್ರಪಾಲಾಗಿದ್ದು, ಐದು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಶಾಲಾ ಕಾಲೇಜುಗಳಿಗೆ ರಜೆ ಸಾರಿದ್ದರು. ಅಂಗನವಾಡಿಗಳಿಗೂ, ಮದ್ರಸಾಗಳಿಗೂ ರಜೆ ಅನ್ವಯಗೊಳಿಸಲಾಗಿತ್ತು. ಮಳೆಯ ಜೊತೆ ಭಾರೀ ಬಿರುಗಾಳಿ ಬೀಸುತ್ತಿರುವುದರಿಂದ ಹೆಚ್ಚಿನ ನಾಶನಷ್ಟಕ್ಕೆ ಕಾರಣವಾಗಿದೆ.
ಕಾಸರಗೋಡು ನಗರಸಭೆಯ ಆಶ್ರಯ ಯೋಜನೆಯಲ್ಲಿ ಕೊರಕ್ಕೋಡು ಬಯಲಿನಲ್ಲಿ ನಿರ್ಮಿಸಲಾಗಿದ್ದ ಮನೆಗಳು ನೀರಿನಿಂದ ಆವೃತವಾಗಿದೆ. ಪಕ್ಕದ ಚಂದ್ರಗಿರಿ ಹೊಳೆ ತುಂಬಿ ತುಳುಕುತ್ತಿದೆ. ವಯಲಾಂಕುಳಿಯಲ್ಲಿ ಹೆಚ್ಚಿನ ಪ್ರದೇಶಗಳು ನೀರಿನಿಂದ ಆವೃತ್ತವಾಗಿದ್ದು, ಭತ್ತದ ಹೊಲಗಳೂ ನೀರಿನಲ್ಲಿ ಮುಳುಗಿವೆ. ಜಿಲ್ಲೆಯ ಮಲೆನಾಡ ಪ್ರದೇಶಗಳಲ್ಲಿ ಬಿರುಗಾಳಿಗೆ ಹಲವು ಕಂಗು ಮತ್ತು ತೆಂಗಿನ ಮರಗಳು ಬುಡಸಮೇತ ಮಗುಚಿ ಬಿದ್ದಿದೆ. ಇತರ ಕೃಷಿಗಳು ಹಾನಿಗೀಡಾಗಿವೆ.
ಬಂದಡ್ಕ ಚಾಮಕೊಚ್ಚಿ ಚಾಪಕ್ಕಲ್‍ನ ಕೋರ್ಪಾಳು ಅವರ ಮೇಲೆ ಮರ ಬಿದ್ದಿದೆ. ಮೀಯಪದವು ಕುಳವಯಲ್‍ನಲ್ಲಿ ಬಾಡೂರಿನ ಬಡುವನ್ ಕುಂಞÂ ಅವರ ಮನೆಯ ಪಕ್ಕದ ದೊಡ್ಡಿಗೆ ಸಿಡಿಲು ಬಡಿದು ದನ ಮತ್ತು ಕರು ಸಾವಿಗೀಡಾಗಿದೆ. ಮನೆಗೂ ಸಿಡಿಲು ಬಡಿದು ಇಲೆಕ್ಟ್ರೋನಿಕ್ ಉಪಕರಣಗಳು, ವಿದ್ಯುತ್ ವಯರ್ ಬೆಂಕಿಗಾಹುತಿಯಾಗಿದೆ. ಮನೆಗೂ ಹಾನಿಯಾಗಿದೆ. ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಆಲಂಪಾಡಿ ಅನಾಥಾಲಯದ ಬಳಿಯ ಅಬ್ದುಲ್ ಖಾದರ್ ಅವರ ಹೆಂಚು ಹಾಸಿದ ಮನೆಯ ಮೇಲ್ಛಾವಣಿ ಬಿರುಗಾಳಿಯಿಂದ ಕುಸಿದು ಬಿದ್ದಿದೆ. ಬಂದಡ್ಕ ಚಾಪಕ್ಕಲ್ ತುಕ್ಕೂಟ್ ನಾಯ್ಕ ಅವರ ಬೈಕ್‍ನ ಮೇಲೆ ಮರ ಬಿದ್ದು ಹಾನಿಗೀಡಾಗಿದೆ. ಬಿರುಗಾಳಿಗೆ ಕುತ್ತಿಕೋಲ್ ವಿದ್ಯುತ್ ಕಚೇರಿ ಸಂಪರ್ಕ ಮೊಟಕುಗೊಂಡಿದೆ. ಪಾಲಾರ್‍ನಲ್ಲಿ ಎರಡು, ಚಾಮಕೊಚ್ಚಿ, ಮಲ್ಲಂಪಾರೆ ಮತ್ತು ಮಾಕಟ್ಟೆಯಲ್ಲಿ ಒಂದರಂತೆ ವಿದ್ಯುತ್ ಕಂಬ ಕುಸಿದು ಬಿದ್ದಿದೆ.
ವೆಳ್ಳರಿಕುಂಡು ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದೆ. ಅಲ್ಲಿ ಭಾರೀ ನಾಶನಷ್ಟ ಉಂಟಾಗಿದೆ. ಚೆರ್ವತ್ತೂರು ಮತ್ತು ಸಮೀಪ ಪ್ರದೇಶಗಳಲ್ಲಿ ಬಿರುಗಾಳಿಗೆ ಮೇಲ್ಸೇತುವೆ ರಸ್ತೆಯ ಕೃಷಿ ಭವನ ಬಳಿ ನಿಲ್ಲಿಸಲಾಗಿದ್ದ ಕುಟ್ಟಮತ್ತ್ ಪೆÇನ್ನಲದ ಟಿ.ಮೋಹನ್ ಅವರ ಕಾರಿನ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಗೀಡಾಗಿದೆ. ಅಲ್ಲೇ ಪಕ್ಕದ ದಿನೇಶ್ ಉತ್ಪನ್ನಗಳ ಸ್ಟಾಲ್‍ನ ಎದುರುಗಡೆಯ ಶೀಟ್ ಹಾನಿಗೀಡಾಗಿದೆ. ಬೈಕ್ ಕೂಡಾ ಹಾನಿಯಾಗಿದೆ. ಹೊಸದುರ್ಗ ಮಡಿಕೈಯ ತಂಡಾರ ಕಾತ್ರ್ಯಾಯಿನಿ ಅವರ ಮನೆ ಮೇಲೆ ಮರ ಬಿದ್ದು ಹಾನಿಗೀಡಾಗಿದೆ.
ಅಂಗಡಿಗೆ ನುಗ್ಗಿದ ನೀರು : ಬುಧವಾರ ರಾತ್ರಿ ಸುರಿದ ಮಳೆಯಿಂದ ಹಳೆ ಬಸ್ ನಿಲ್ದಾಣದಲ್ಲಿರುವ ಕೆಲವು ಅಂಗಡಿಯೊಳಗೆ ನೀರು ನುಗ್ಗಿದೆ. ಹೊಟೇಲ್ ಸಹಿತ ಆರು ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ತೀವ್ರಗೊಂಡ ಮಳೆ-ಕಡಲ್ಕೊರೆತದ ಭೀತಿ-ಒಂದು ಮನೆ ನಾಶ
ಉಪ್ಪಳ:/ಕುಂಬಳೆ: ಮಳೆಯ ಅಬ್ಬರ ತೀವ್ರಗೊಂಡಿರುವಂತೆ ಕಡಲ್ಕೊರೆತವೂ ಭೀತಿ ತಂದೊಡ್ಡಿದೆ. ಉಪ್ಪಳ ಮುಸೋಡಿಯ ಮನೆಯೊಂದು ಗುರುವಾರ ರಾತ್ರಿ ಸಮುದ್ರ ಪಾಲಾಗಿದೆ. ಅಲ್ಲದೆ ಇತರ ಐದು ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಹಲವಾರು ತೆಂಗಿನ ಮರಗಳೂ ಕಡಲೊಳಗೆ ಸೇರಿದೆ.
ಮುಸೋಡಿಯ ಅಬ್ದುಲ್ಲ ಎಂಬವರ ಮನೆ ಗುರುವಾರ ರಾತ್ರಿ ನೀರು ಪಾಲಾಗಿದೆ. ಅಬ್ದುಲ್ಲರ ಕುಟುಂಬವನ್ನು ಮೊದಲೇ ಸ್ಥಳಾಂತರಿಸಿದ್ದರಿಂದ ಜೀವಹಾನಿ ತಪ್ಪಿಹೋಗಿದೆ. ಇವರ ಮನೆ ಸಮೀಪದ ನಫೀಸಾ ಎಂಬವರ ಮನೆಯೂ ಸಮುದ್ರ ಪಾಲಾಗುವ ಭೀತಿ ಎದುರಿಸುತ್ತಿದೆ. ಜೊತೆಗೆ ಈ ಪರಿಸರದ ಅಬ್ಬಾಸ್, ಮೊಹಮ್ಮದ್ ಹನೀಫ್, ಅಬ್ದುಲ್ ಮಜೀದ್, ಮೊಯ್ದು, ಮರಿಯಮ್ಮ ಎಂಬವರ ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಸೋಡಿ ಶಾಲೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಇನ್ನಷ್ಟು ಮನೆಗಳು ಅಪಾಯದ ಭೀತಿಯಲ್ಲಿದೆ.
ಗುರುವಾರ ರಾತ್ರಿಯಿಂದ ಕಡಲ್ಕೊರೆತ ಭೀತಿದಾಯಕವಾಗಿ ಕಂಡುಬಂದಿದ್ದು, ಆತಂಕ ಸೃಷ್ಟಿಯಾಗಿದೆ. ಗುರುವಾರ ಅಧಿಕಾರಿಗಳು ಕಡಲ್ಕೊರೆತದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಣಿಮುಂಡ, ಹನುಮಾನ್ ನಗರ, ಶಾರದಾ ನಗರ ಮೊದಲಾದೆಡೆ ಕಡಲ್ಕೊರೆತ ಅಪಾಯಕಾರಿಯಾಗಿ ನಡುಕ ಹುಟ್ಟಿಸಿದೆ.
ಶಿಯಾದಲ್ಲಿ ಕಡಲ್ಕೊರೆತ:
ಮಂಗಲ್ಪಾಡಿ ಪಂಚಾಯತಿ ವ್ಯಾಪ್ತಿಯ ಶಿರಿಯದಲ್ಲೂ ಕಡಲ್ಕೊರೆತ ತೀವ್ರಗೊಂಡಿದೆ. ಈ ಪರಿಸರದ ಸಿದ್ದೀಕ್ ಎಂಬವರ 30ರಷ್ಟು ಫಲಭರಿತ ತೆಂಗಿನ ಮರಗಳು ಯಾವುದೇ ಕ್ಷಣದಲ್ಲಿ ಸಮುದ್ರ ಪಾಲಾಗುವ ಸ್ಥಿತಿಯಲ್ಲಿದೆ. ಮೊಯ್ದೀನ್ ಕುಂಞÂ, ಉಸ್ಮಾನ್,ಭೀಪಾತುಮ್ಮ, ಮರಿಯಮ್ಮ, ಹಾಜಿರ, ಅಶ್ರಫ್, ಯೂಸುಫ್ ಎಂಬವರ ಮನೆಗಳೂ ತೀವ್ರ ಅಪಾಯದಲ್ಲಿದೆ.
ಜಿಲ್ಲೆಯಲ್ಲಿ 2015.776 ಮಿ.ಮೀ. ಮಳೆ : ಜಿಲ್ಲೆಯಲ್ಲಿ ಬಿರುಸಿನ ಮಳೆ ಆರಂಭಗೊಂಡ ನಂತರ ಈ ವರೆಗೆ 2015.776 ಮಿ.ಮೀ. ಮಳೆ ಲಭಿಸಿದೆ. ಕಳೆದ 24 ತಾಸುಗಳಲ್ಲಿ 57.662 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 13 ಮನೆಗಳು ಪೂರ್ಣರೂಪದಲ್ಲಿ, 186ಮನೆಗಳು ಭಾಗಶ: ಹಾನಿಗೊಂಡಿವೆ. ಕಳೆದ 24 ತಾಸುಗಳಲ್ಲಿ 8 ಮನೆಗಳು ಅರ್ಧಾಂಶ ನಾಶವಾಗಿವೆ. ಜಿಲ್ಲೆಯಲ್ಲಿ ಈವರೆಗೆ 2,46,87,600 ರೂ.ನ ಕೃಷಿ ನಾಶ ಗಣನೆ ಮಾಡಲಾಗಿದೆ. 348.52606 ಹೆಕ್ಟೇರ್ ಕೃಷಿ ಜಾಗಕ್ಕೆ ಹಾನಿಯಾಗಿದೆ.