ಗುವಾಹಟಿ: ಮಣಿಪುರ ಸರ್ಕಾರದ ಹಸಿರು ಅಭಿಯಾನಕ್ಕೆ 9 ವರ್ಷದ ಪುಟ್ಟ ಬಾಲಕಿಯನ್ನು ಹೊಸ ರಾಯಬಾರಿಯನ್ನಾಗಿ ನೇಮಿಸಲಾಗಿದೆ.
ಕಾಚಿಂಗ್ ಜಿಲ್ಲೆಯ ಎಲಂಗ್ಬಮ್ ವ್ಯಾಲೆಂಟಿನಾ ದೇವಿ ತನ್ನ ಮನೆ ಬಳಿ ಇದ್ದ ಮರಗಳನ್ನು ರಸ್ತೆ ಅಭಿವೃದ್ದಿಗಾಗಿ ಕಡಿದಿರುವುದನ್ನು ಕಂಡು ಮಮ್ಮಲ ಮರಗಿ ತೀವ್ರವಾಗಿ ಅತ್ತಿದ್ದಾಳೆ.ಈ ವಿಡಿಯೋ ವೀಕ್ಷಿಸಿದ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಹಸಿರು ಅಭಿಯಾನದ ರಾಯಬಾರಿಯನ್ನಾಗಿ ನೇಮಿಸಿದ್ದಾರೆ.
ಎರಡು ಮರಗಳನ್ನು ಕಡಿದಿರುವುದರಿಂದ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕಿ ದು:ಖಿತಗೊಂಡಿದ್ದಾಳೆ. ಆದಾಗ್ಯೂ, ಸರ್ಕಾರ ಹಸಿರು ವನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದ ನಂತರ ಇದೀಗ ಸ್ವಲ್ಪ ಭರವಸೆ ಹೊಂದಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ.
ಎರಡು ಮರಗಳನ್ನು ಕಡಿದಿದ್ದರಿಂದ ಆಕೆ ಆಳುತ್ತಿದ್ದ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ವೀಕ್ಷಿಸಿದ್ದಾಗಿ ಮುಖ್ಯಮಂತ್ರಿ ಬಿರೇನ್ ಸಿಂಗ್ ದೆಹಲಿಯಲ್ಲಿಂದು ಹೇಳಿದ್ದಾರೆ.
ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆಕೆ ಎರಡು ಗುಲ್ಮೋಹರ್ ಸಸಿಗಳನ್ನು ನೆಟ್ಟಿದ್ದಳು. ಆ ಮರಗಳು ದೊಡ್ಡದಾಗಿದ್ದವು. ಶನಿವಾರ ಆಕೆ ಶಾಲೆ ಮುಗಿಸಿ ಮನೆಗೆ ವಾಪಸ್ ಬಂದಾಗ ಆ ಮರಗಳು ನೆಲಕ್ಕುರುಳಿ ಬಿದಿದ್ದನ್ನು ಕಂಡು ತೀವ್ರವಾಗಿ ರೋದಿಸಿದ್ದಳು ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ವಿಡಿಯೋ ವೀಕ್ಷಿಸಿದ ನಂತರ ಆಕೆಯ ಮನೆಗೆ ಹೋಗಿ ಕೆಲ ಸಸಿಗಳನ್ನು ನೀಡಿ ಸಮಾಧಾನಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿಗಳೊಂದಿಗೆ ಎಸ್ ಪಿ ಆ ಬಾಲಕಿಯ ಮನೆಗೆ ಹೋಗಿ ಸಮಾಧಾನಪಡಿಸಿದ್ದಾರೆ.
ಜುಲೈ 18 ರಂದು ಮುಖ್ಯಮಂತ್ರಿ ಹಸಿರು ಮಣಿಪುರ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಬಾಲಕಿಯನ್ನು ಹಸಿರು ರಾಯಬಾರಿಯನ್ನಾಗಿ ಮಾಡಬೇಕೆಂಬುದು ಕೂಡಲೇ ನನ್ನ ಗಮನಕ್ಕೆ ಬಂತು ಎಂಬುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಮಣಿಪುರಕ್ಕೆ ವಾಪಸ್ ಆದ ನಂತರ ಆ ಬಾಲಕಿಯನ್ನು ಭೇಟಿ ಮಾಡುವುದಾಗಿ ಅವರು ಹೇಳಿದ್ದಾರೆ.